ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಸಕಲ ಶುಕ್ರವಾರ ಮುಂಡಗೋಡದ ಟಿಬೇಟಿಯನ್ ಕಾಲನಿಗೆ ಪದಾರ್ಪಣೆ ಮಾಡಿದರು. ಸರ್ಕಾರಿ ಗೌರವ ಹಾಗೂ ಟಿಬೇಟಿಯನ್ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು.
ಮುಂಡಗೋಡ: ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಶುಕ್ರವಾರ ಇಲ್ಲಿಯ ಟಿಬೇಟಿಯನ್ ಕಾಲನಿಗೆ ಪದಾರ್ಪಣೆ ಮಾಡಿದರು. ಸರ್ಕಾರಿ ಗೌರವ ಹಾಗೂ ಟಿಬೇಟಿಯನ್ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು.
ಮುಂಡಗೋಡಿನಿಂದ ಟಿಬೇಟಿಯನ್ ಕಾಲನಿ ರಸ್ತೆಯುದ್ದಕ್ಕೂ ಕೈಯಲ್ಲಿ ಪುಷ್ಪಗುಚ್ಛ, ಬಿಳಿ ಶಾಲು ಸೇರಿದಂತೆ ಟಿಬೇಟಿಯನ್ ಸಂಸ್ಕೃತಿಯ ವಸ್ತುಗಳನ್ನು ಹಿಡಿದುಕೊಂಡು ಸಾಲು ಸಾಲಾಗಿ ನಿಂತ ಸಾವಿರಾರು ಸಂಖ್ಯೆಯ ಟಿಬೇಟಿಯನ್ ವಿದ್ಯಾರ್ಥಿಗಳು, (ಬಿಕ್ಕು) ಲಾಮಾಗಳು ದಲೈ ಲಾಮಾ ಅವರನ್ನು ಬರಮಾಡಿಕೊಂಡರು.ಇದಕ್ಕೂ ಮುನ್ನ ದೆಹಲಿಯಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತಡಸ-ಮುಂಡಗೋಡ ರಸ್ತೆ ಮಾರ್ಗವಾಗಿ ಟಿಬೇಟಿಯನ್ ಕಾಲನಿಗೆ ಕರೆತರಲಾಯಿತು. ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಜಿಲ್ಲಾಡಳಿತದ ವತಿಯಿಂದ ದಲೈ ಲಾಮಾ ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸುವ ಮೂಲಕ ಬರ ಮಾಡಿಕೊಂಡರು.
ಲಾಮಾ ಕ್ಯಾಂಪ್ ನಂ. ೨ರ ಡ್ರೆಪುಂಗ್ ಟಾಶಿ ಮಾಮಾಂಗ್ ಡಿಬೆಟ್ ಹಾಲ್‌ನಲ್ಲಿ ಬೌದ್ಧ ಮೊನೆಸ್ಟ್ರಿಯಲ್ಲಿ ಧಾರ್ಮಿಕ ಪೂಜೆ ನಡೆಸುವ ಮೂಲಕ ಇಲ್ಲಿಯ ಟಿಬೇಟಿಯನ್ ಬಿಕ್ಕುಗಳಿಗೆ ಆಶೀರ್ವಚನ ನೀಡಿದರು.ದಲೈ ಲಾಮಾ ೪೫ ದಿನಗಳ ಕಾಲ ಇಲ್ಲಿಯ ಟಿಬೇಟಿಯನ್ ಕಾಲನಿಯಲ್ಲಿ ನೆಲೆಸಲಿದ್ದು, ವಿವಿಧ ಬೌದ್ಧ ಸಂಸ್ಕೃತಿ ಕಟ್ಟಡ ಹಾಗೂ ಮೂರ್ತಿ ಅನಾವರಣಗೊಳಿಸಲಿದ್ದಾರೆ. ಬೌದ್ಧ ಮಠಗಳಲ್ಲಿ ನಿತ್ಯ ನಡೆಯಲಿರುವ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮ ಬೋಧನೆ ಮಾಡಲಿದ್ದಾರೆ.
ಬೌದ್ಧ ಧರ್ಮಕ್ಕೆ ಜಗತ್ತಿನಾದ್ಯಂತ ಪ್ರಾಮುಖ್ಯ: ದಲೈ ಲಾಮಾಭಾರತದಲ್ಲಿ ಉದ್ಭವವಾಗಿರುವ ಬೌದ್ಧ ಧರ್ಮ ಜಗತ್ತಿನಾದ್ಯಂತ ಪಸರಿಸಿದ್ದು, ಬೌದ್ಧ ಧರ್ಮಕ್ಕೆ ಚೀನಾ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಾಮುಖ್ಯ ನೀಡಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೇಟಿಯನ್ ಧರ್ಮ ಗುರು ದಲೈ ಲಾಮಾ ಹೇಳಿದರು.ಶುಕ್ರವಾರ ಸಕಲ ಸರ್ಕಾರಿ ಗೌರವ ಹಾಗೂ ಟಿಬೇಟಿಯನ್ ಧಾರ್ಮಿಕ ವಿಧಿ-ವಿಧಾನ ಅದ್ಧೂರಿ ಸ್ವಾಗತದೊಂದಿಗೆ ಶುಕ್ರವಾರ ಇಲ್ಲಿಯ ಟಿಬೇಟಿಯನ್ ಕಾಲನಿಗೆ ಆಗಮಿಸಿದ ಅವರು, ಬಳಿಕ ಲಾಮಾ ಕ್ಯಾಂಪ್ ನಂ. ೨ರ ಡ್ರೆಪುಂಗ್ ಟಾಶಿ ಗೋಮಾಂಗ್ ಡಿಬೆಟ್ ಹಾಲ್‌ನಲ್ಲಿ ಧಾರ್ಮಿಕ ಪೂಜೆ ನಡೆಸುವ ಮೂಲಕ ಇಲ್ಲಿಯ ಟಿಬೇಟಿಯನ್ ಬಿಕ್ಕುಗಳಿಗೆ ಧರ್ಮ ಬೋಧನೆ ಮಾಡಿದರು. ಶ್ರೇಷ್ಠ ಧರ್ಮದಲ್ಲಿ ಒಂದಾಗಿರುವ ಬೌದ್ಧ ಧರ್ಮದ ಸಂಸ್ಕೃತಿಯನ್ನು ಉಳಿಸಿ, ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್, ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯರಾಣಿ, ಮುಂಡಗೋಡ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ತಹಸೀಲ್ದಾರ್ ಶಂಕರ ಗೌಡ ಹಾಗೂ ಟಿಬೇಟಿಯನ್ ಮುಖಂಡರು ಉಪಸ್ಥಿತರಿದ್ದರು.