ಮಂದಳ್ಳಿ ಗ್ರಾಮದಲ್ಲಿ ಮನೆಗೆ ಬೆಂಕಿ ಹಚ್ಚಿ 1.5 ಲಕ್ಷ ನಗದು ದಹನ । ಹಳೆ ದ್ವೇಷದ ಹಿನ್ನೆಲೆ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಹಳೆ ದ್ವೇಷದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ, ಮನೆಗೆ ಬೆಂಕಿ ಹಚ್ಚಿ ನಗದು ಹಣ ದಹನಗೊಳಿಸಿರುವ ಘಟನೆ ತಾಲೂಕಿನ ಯಸಳೂರು ಹೋಬಳಿಯ ಮಂದಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯನ್ನು ಖಂಡಿಸಿ ದಲಿತ ಮುಖಂಡರು ಯಸಳೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನೆಯ ಹಿನ್ನೆಲೆ:

ಮಂದಳ್ಳಿ ಗ್ರಾಮದ ದೇವರಾಜು (50) ಅವರ ಅಳಿಯನ ಬೈಕನ್ನು ಅದೇ ಗ್ರಾಮದ ವೆಂಕಟೇಶ್ ಶೆಟ್ಟಿ (70) ಎಂಬಾತ ವಿನಾಕಾರಣ ಕಾಡಿನೊಳಗೆ ನೂಕಿ ಬಂದಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಇಬ್ಬರು ಪ್ರತ್ಯಕ್ಷದರ್ಶಿಗಳಿದ್ದು, ಈ ಸಂಬಂಧ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.ಬಳಿಕ ಗ್ರಾಮಸ್ಥರು ರಾಜೀ ಪಂಚಾಯಿತಿ ನಡೆಸಿ, ವೆಂಕಟೇಶ್ ಶೆಟ್ಟಿಗೆ 6,000 ದಂಡ ವಿಧಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದ್ದರು. ಆದರೆ, ಈ ವಿಚಾರದಿಂದ ಆರೋಪಿ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.ದಾರಿ ತಡೆದು ಹಲ್ಲೆ, ಜಾತಿ ನಿಂದನೆ


ಮೇ 31ರಂದು ದೇವರಾಜು ಅವರು ಕೂಲಿ ಕೆಲಸ ಮುಗಿಸಿ ತೋಟದ ಮಾಲೀಕರಿಂದ ಹಣ ಪಡೆದು ಮನೆಗೆ ವಾಪಸ್ ಬರುತ್ತಿದ್ದ ವೇಳೆ, ವೆಂಕಟೇಶ್ ಶೆಟ್ಟಿ ರಸ್ತೆಯಲ್ಲಿ ಅಡ್ಡಗಟ್ಟಿದ್ದಾನೆ ಎನ್ನಲಾಗಿದೆ. "ನನ್ನ ವಿರುದ್ಧ ದೂರು ನೀಡಲು ನೀನೇ ಪ್ರಚೋದನೆ ನೀಡಿದ್ದೀಯಾ? " ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ನಡೆಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕತ್ತಿಯಿಂದ ಕಾಲಿಗೆ ಬಲವಾಗಿ ಕಡಿದ ಪರಿಣಾಮ ದೇವರಾಜು ಅವರ ಕಾಲಿನ ಮೂಳೆ ಮುರಿದಿದ್ದು, ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮನೆಗೆ ಬೆಂಕಿ ಹಚ್ಚಿದ ಆರೋಪ:

ಹಲ್ಲೆ ಘಟನೆಯ ಮರು ದಿನವಾದ ಜೂನ್ 1ರ ರಾತ್ರಿ ದೇವರಾಜು ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. "ಪಿಕಪ್ ವಾಹನ ಖರೀದಿಸುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಿಸಿದ್ದ ಸುಮಾರು 1.5 ಲಕ್ಷ ನಗದು ಹಣ, ಚೆಕ್ ಬುಕ್ ಹಾಗೂ ಇತರೆ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ " ಎಂದು ದೇವರಾಜು ಅವರ ಪುತ್ರ ಮನೋಹರ್ ಆರೋಪಿಸಿದ್ದಾರೆ.ದಲಿತ ಮುಖಂಡರ ಆಕ್ರೋಶ:

ಘಟನೆ ತಿಳಿಯುತ್ತಿದ್ದಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಯಸಳೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ದಲಿತ ಕುಟುಂಬದ ಮೇಲೆ ನಿರಂತರ ದೌರ್ಜನ್ಯ ಎಸಗಿರುವ ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಸೂಕ್ತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗಾಯಾಳು ದೇವರಾಜು ಅವರಿಗೆ ಸೂಕ್ತ ಪರಿಹಾರ ಹಾಗೂ ನೊಂದ ಕುಟುಂಬಕ್ಕೆ ಸರ್ಕಾರದಿಂದ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.