ದಲಿತ ಚಳವಳಿ, ಪ್ರೊ.ಕೃಷ್ಣಪ್ಪ ಒಂದೇ ನಾಣ್ಯದ 2 ಮುಖ: ಎಂ.ಗುರುಮೂರ್ತಿ

| Published : Aug 06 2024, 12:33 AM IST

ದಲಿತ ಚಳವಳಿ, ಪ್ರೊ.ಕೃಷ್ಣಪ್ಪ ಒಂದೇ ನಾಣ್ಯದ 2 ಮುಖ: ಎಂ.ಗುರುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಂ.ಗುರುಮೂರ್ತಿ ಅವರು ದಲಿತ ಸಂಘರ್ಷ ಸಮಿತಿ ಚಳವಳಿಯ ಸಂಭ್ರಮೋತ್ಸವದ ಪೋಸ್ಟರ್‌ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ಕರ್ನಾಟಕದ ದಲಿತ ಚಳವಳಿ 50 ವರ್ಷ ಪೂರೈಸಿದ್ದು, ಆ.7ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭನವದಲ್ಲಿ ಸಂಭ್ರಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿ ಅದನ್ನು ಇಡೀ ರಾಜ್ಯಾದ್ಯಂತ ಹರಡಿ ಹೆಮ್ಮರವಾಗುವಂತೆ ದುಡಿದವರು ಪ್ರೊ.ಬಿ.ಕೃಷ್ಣಪ್ಪನವರು. ದಲಿತ ಚಳವಳಿ ಎಂದರೆ ಪ್ರೊ.ಬಿ.ಕೃಷ್ಣಪ್ಪ, ಪ್ರೊ.ಕೃಷ್ಣಪ್ಪ ಎಂದರೆ ದಲಿತ ಚಳವಳಿ ಎಂಬುದು ಕನ್ನಡ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಷ್ಟರಮಟ್ಟಿಗೆ ಕರ್ನಾಟಕದ ದಲಿತರ ಪಾಲಿಗೆ ದಲಿತ ಚಳವಳಿ ಮತ್ತು ಪ್ರೊ.ಕೃಷ್ಣಪ್ಪ ಒಂದೇ ನಾಣ್ಯದ 2 ಮುಖಗಳು ಎಂದರು.

ಸಾಮಾಜಿಕ ನ್ಯಾಯವನ್ನು ವರ್ತಮಾನದ ಎಲ್ಲಾ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಾಗ್ವಾದಗಳ ಕೇಂದ್ರ ಪ್ರಜ್ಞೆಯಾಗಿಸಿದ ಯಶಸ್ಸು ದಲಿತ ಚಳವಳಿ ಮತ್ತು ಪ್ರೊ.ಬಿ.ಕೃಷ್ಣಪ್ಪನವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ದಲಿತ ಚಳುವಳಿಯ 50ವರ್ಷಗಳನ್ನು ಬಹಳ ಸಂಭ್ರಮದಿಂದ ಆ.7ರಂದು ಆಚರಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತಿದ್ದು, ಪ್ರೊ.ಕೃಷ್ಣಪ್ಪನವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮುಂಡಗೋಡದ ಬೌದ್ಧ ಪೀಠದ ಜೆಸೆ ಜಾಂಗ್‍ಶಪ್ ಸಂಗ್ಯ, ಜೆಸೆ ಲೋಬ್‍ಸ್ಯಾಂಗ್ ಟೆಂಪ ವಹಿಸಲಿದ್ದು, ಪ್ರಗತಿಪರ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ಸಚಿವ ಸತೀಶ್ ಜಾರಕಿಹೊಳಿ ಡಾ.ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಎನ್.ಎಸ್.ಭೋಸರಾಜು, ಮಧು ಬಂಗಾರಪ್ಪ, ಶಾಸಕ ರಿಜ್ವನ್ ಅರ್ಷದ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಏಳುಕೋಟಿ, ಶಿವಬಸಪ್ಪ, ಪ್ರೊ.ಚಂದ್ರಪ್ಪ, ಹರಿಗೆ ರವಿ, ರಾಜಶೇಖರ್, ಹನುಮಂತಪ್ಪ, ಶ್ರೀನಿವಾಸ್, ಬಸವರಾಜ್, ಮಂಡಗಲೆ ನಾರಾಯಣ್, ವೀರೇಶ್, ಬೊಮ್ಮನಕಟ್ಟೆ ಕೃಷ್ಣ ಇದ್ದರು.