ಸಾರಾಂಶ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ರಾಜ್ಯ ದಲಿತ ಸಂಘರ್ಷ ಸಮಿತಿ, ಐಕ್ಯ ಹೋರಾಟ 12 ಸಂಘಟನೆಗಳು ಸೇರಿ ಚಾಲನಾ ಸಮಿತಿಗಳು ತೀರ್ಮಾನ ಕೈಗೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ರಾಜ್ಯ ದಲಿತ ಸಂಘರ್ಷ ಸಮಿತಿ, ಐಕ್ಯ ಹೋರಾಟ 12 ಸಂಘಟನೆಗಳು ಸೇರಿ ಚಾಲನಾ ಸಮಿತಿಗಳು ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ಸಂಘ ಪರಿವಾರದವರು ಕಳೆದ 10 ವರ್ಷಗಳಿಂದ ದುರ್ಬಲಗೊಳಿಸಲು ಹುನ್ನಾರ ನಡೆಸಿದ್ದಾರೆ. ಹಿಂದೂ ಧರ್ಮದ ಹೆಸರಿನಲ್ಲಿ ಧರ್ಮ ಸಂಸದ್ ಸ್ಥಾಪಿಸಿ, ಮೇಲ್ಜಾತಿ ಹಿಡಿತವನ್ನು ಮರು ಸ್ಥಾಪಿಸುವುದು ಅವರ ಗುರಿಯಾಗಿದೆ, ಮನೋಧರ್ಮವನ್ನು ಗಟ್ಟಿಗೊಳಿಸುವ ರಾಜಕೀಯ ಅಜೆಂಡಾ ಇರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿದರು.
ನಮ್ಮ ಸಂಘಟನೆಗಳು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ತೆರಳಿ, ಹಿಂದುಳಿದ ಅಲ್ಪಸಂಖ್ಯಾತ ಮುಖಂಡರು ಇತರರೊಂದಿಗೆ ಸೇರಿ ಜನರಲ್ಲಿ ಜಾಗೃತಿ ಮೂಡಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತೇವೆ, ಅದರಂತೆಯೇ, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಧಾಕೃಷ್ಣ ದೊಡ್ಡಮನಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಿ. ಕುಮಾರನಾಯಕ ಅವರನ್ನು ಜಿಲ್ಲೆಯ ಮತದಾರರು ಬೆಂಬಲಿಸುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಡಿಎಸ್‌ಎಸ್ ನಾಗಣ್ಣ ಬಡಿಗೇರ, ಮರೆಪ್ಪ ಚಟ್ಟೇರಕರ್, ಗೋಪಾಲ ತಳಕೇರಿ, ಸೈದಪ್ಪ ಕೋಲೂರ, ಲಿಂಗಣ್ಣ ಬೀರನಾಳ, ಮರಳುಸಿದ್ದಪ್ಪ ನಾಯ್ಕಲ್, ಮಲ್ಲಿನಾಥ ಸುಂಗಲಕರ್, ಅಜೀಜ್ ಸಾಬ್ ಐಕೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.