ದಲಿತ ಮಹಿಳೆಗೆ ಹಲ್ಲೆ: ಇನ್ನಿಬ್ಬರ ಸೆರೆ, ಇಬ್ಬರು ಪೊಲೀಸರ ಅಮಾನತು

| Published : Mar 21 2025, 12:32 AM IST

ದಲಿತ ಮಹಿಳೆಗೆ ಹಲ್ಲೆ: ಇನ್ನಿಬ್ಬರ ಸೆರೆ, ಇಬ್ಬರು ಪೊಲೀಸರ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದಲಿತ ಮಹಿಳೆಯ ವಿರುದ್ಧ ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ, ಅಲ್ಲಿಗೆ ಬಂಧಿತ ಸಂಖ್ಯೆ 5ಕ್ಕೇರಿದೆ. ಕರ್ತವ್ಯಲೋಪ ಎಸಗಿದ ಮಲ್ಪೆ ಬಂದರ್‌ ಬೀಟ್‌ ನ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ದಲಿತ ಮಹಿಳೆಯ ವಿರುದ್ಧ ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ, ಅಲ್ಲಿಗೆ ಬಂಧಿತ ಸಂಖ್ಯೆ 5ಕ್ಕೇರಿದೆ.

ಜೊತೆಗೆ ಈ ಘಟನೆಯ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸದೆ ಕರ್ತವ್ಯಲೋಪ ಎಸಗಿದ ಮಲ್ಪೆ ಬಂದರ್‌ ಬೀಟ್‌ ನ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಮಂಗಳವಾರ, ಬೋಟಿನಿಂದ ಮೀನು ಇಳಿಸುವ ವಿಜಯಪುರ ಜಿಲ್ಲೆ ಮೂಲದ ಈ ಮಹಿಳೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ತಲೆ ಮೇಲೆ ಬುಟ್ಟಿಯಲ್ಲಿ, ಕದ್ದ ಮೀನು ಸಾಗಿಸುತಿದ್ದಳು ಎಂದು ಆರೋಪಿಸಿ, ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಕೆನ್ನೆಗೆ ಹೊಡೆದು ಹಲ್ಲೆ ಮಾಡಲಾಗಿತ್ತು. ಈ ಘಟನೆ ವಿಡಿಯೋ ವೈರಲ್ ಆದ ಮೇಲೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಲ್ಲೆ ನಡೆಸಿದ ಮೀನುಗಾರ ಮಹಿಳೆಯರಾದ ಲಕ್ಷ್ಮೀ, ಶಿಲ್ಪ ಮತ್ತು ಬೋಟು ಮಾಲಕ ಸುಂದರ್ ಎಂಬವರನ್ನು ಬುಧವಾರ ಬಂಧಿಸಿದ್ದರು.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದಲಿತ ಸಮಿತಿ ಮತ್ತು ಇತರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತಿದ್ದು, ಪೊಲೀಸರು ಗುರುವಾರ ಲೀಲಾ ಮತ್ತು ಪಾರ್ವತಿ ಎಂಬ ಮೀನುಗಾರ ಮಹಿಳೆಯರನ್ನೂ ಬಂಧಿಸಿದ್ದಾರೆ.

ದಲಿತ ಮಹಿಳ‍ೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಈ ಘಟನೆಯ ಬಗ್ಗೆ ತಕ್ಷಣ ಸರಿಯಾದ ಮಾಹಿತಿ ಸಂಗ್ರಹಿಸಿ ಠಾಣೆಗೆ ನೀಡಿಲ್ಲ ಎಂಬ ಕಾರಣಕ್ಕೆ ಬೀಟ್‌ ಪೊಲೀಸ್‌ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಸುರೇಶ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ನಾಗರಾಜ್ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಅವರು ಅಮಾನತುಗೊಳಿಸಿದ್ದಾರೆ.

....................

ಮಹಿಳಾ ಆಯೋಗದ ಮಧ್ಯಪ್ರವೇಶ !ಈ ಪ್ರಕರಣದಲ್ಲಿ ಒಬ್ಬ ದಲಿತ ಮಹಿಳೆ ಮೇಲೆ ನಡೆದಿರುವ ಅಮಾನುಷ ಕೃತ್ಯವನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಈ ಪ್ರಕರಣಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಸಮಗ್ರ ವರದಿ ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚಿಸಿದ್ದಾರೆ..................ರಾಜಿ ಪಂಚಾಯ್ತಿ ಪ್ರಯತ್ನ ನಡೆದಿತ್ತೇ ?

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನೆಗೆ ಕಾರಣವಾಗುತ್ತಿದ್ದಂತೆ ಪೊಲೀಸರು ಘಟನೆಯ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಆದರೆ, ಅದಕ್ಕೆ ಮೊದಲು ಮಲ್ಪೆ ಠಾಣೆಯಲ್ಲಿ ಪ್ರಕರಣವನ್ನು ರಾಜಿ ಪಂಚಾಯತಿ ಮೂಲಕ ಮುಗಿಸುವ ಪ್ರಯತ್ನ ನಡೆದಿತ್ತು. ಪೊಲೀಸರು ಬೋಟು ಮಾಲಕರನ್ನು ರಾಜಿ ಪಂಚಾಯತಿಗೆ ಸಹಿ ಮಾಡಲೆಂದು ಕರೆಸಿದ್ದರು. ನಂತರ ರಾಜಿ ಪಂಚಾಯತಿಗೆ ಮಾನ್ಯತೆ ನೀಡದೆ 3 ಮಂದಿಯನ್ನು ಜಾಮೀನುರಹಿತ ಸಕ್ಷನ್‌ಗಳನ್ನು ಹಾಕಿ ಬಂಧಿಸಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘ ಆರೋಪಿಸಿದೆ......................ನಾಳೆ ಮೀನುಗಾರಿಕೆ ಬಂದ್, ಪ್ರತಿಭಟನೆ

ಈ ಘಟನೆಯಲ್ಲಿ ಪೊಲೀಸರು 5 ಮಂದಿ ಮೀನುಗಾರರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಮಲ್ಪೆ ಮೀನುಗಾರರ ಸಂಘ ಮಾ.22ರಂದು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಬಂದ್‌ಗೆ ಕರೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ. ಇದರಿಂದ ಮೀನುಗಾರರ ಸಮುದಾಯಕ್ಕೆ ಕಳಂಕ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ನೀಡುವುದಕ್ಕಾಗಿ ಶನಿವಾರ ಮೀನುಗಾರಿಕೆ ಸ್ಥಗಿತಗೊಳಿಸಿ, ಬೆಳಿಗ್ಗೆ 9 ಗಂಟೆಗೆ ಸಮಸ್ತ ಮೀನುಗಾರರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.