ಯಾದಗಿರಿಯಲ್ಲಿ ರೊಟ್ಟಿ ಕೇಳಿದ್ದಕ್ಕೆ ದಲಿತ ಯುವಕನ ಹತ್ಯೆ

| Published : Apr 23 2024, 12:55 AM IST / Updated: Apr 23 2024, 10:22 AM IST

ಯಾದಗಿರಿಯಲ್ಲಿ ರೊಟ್ಟಿ ಕೇಳಿದ್ದಕ್ಕೆ ದಲಿತ ಯುವಕನ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರಿಬ್ಬರ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಯಾದಗಿರಿ ನಗರದ ಶಹಾಪುರಪೇಠದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.

 ಯಾದಗಿರಿ :  ರೊಟ್ಟಿ ಕೊಡುವಂತೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ, ಯುವಕರಿಬ್ಬರ ನಡುವಿನ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಯಾದಗಿರಿ ನಗರದ ಶಹಾಪುರಪೇಠದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಹತ್ಯೆಗೊಳಗಾದ ಯುವಕನನ್ನು ದಲಿತ ಸಂಘಟನೆಯ ರಾಕೇಶ (22) ಎಂದು ಗುರುತಿಸಲಾಗಿದೆ.

ಯಾದಗಿರಿ ನಗರದ ಶಹಾಪುರಪೇಟೆಯ ಯುವಕ ರಾಕೇಶ್ (22) ಪ್ರತಿನಿತ್ಯ ರೊಟ್ಟಿ ಕೇಂದ್ರಗಳಿಗೆ ಅಥವಾ ಅಕ್ಕಪಕ್ಕದ ಮನೆಯಲ್ಲಿ ರೊಟ್ಟಿ ಕೇಳಿ ಪಡೆದು ಊಟ ಮಾಡುತ್ತಿದ್ದ. ಭಾನುವಾರ ರಾತ್ರಿ ಸಹ ಎಂದಿನಂತೆ ರೊಟ್ಟಿ ಪಡೆಯಲು ತೆರಳಿದ್ದಾಗ ರೊಟ್ಟಿ ಕೇಂದ್ರದ ಬಳಿ ರಾಕೇಶ ಜೊತೆ ಫಯಾಜ್ ಎಂಬಾತ ಮಾತಿನ ಚಕಮಕಿ ನಡೆಸಿದ್ದಾನೆ. ಇಬ್ಬರ ನಡುವೆ ಸಣ್ಣದಾದ ಜಗಳ ಏರ್ಪಟ್ಟು, ಮಧ್ಯೆರಾತ್ರಿ ರಾಕೇಶನ ಮನೆಗೆ ತೆರಳಿದ ಫಯಾಜ್‌ ಆತನ ಗುಪ್ತಾಂಗಕ್ಕೆ ಒದ್ದಿದ್ದಾನೆ. ಇದರಿಂದ ರಾಕೇಶ ಮೃತಪಟ್ಟಿದ್ದಾನೆಂದು ಆರೋಪಿಸಲಾಗಿದೆ.

ಕೊಲೆಯಾದ ರಾಕೇಶನ ತಾಯಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ಮೃತದೇಹವನ್ನು ಮರೋಣತ್ತರ ಪರೀಕ್ಷಗೆ ತೆಗೆದುಕೊಂಡು ಹೋಗಲಾಯಿತು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಪರ ಸಂಘಟನೆಗಳ ಆರೋಪ: ದಲಿತ ಯುವಕನೊಬ್ಬನನ್ನು ಮುಸ್ಲಿಂ ಸಮುದಾಯದ ಯುವಕನೊಬ್ಬ ಕೊಲೆ ಮಾಡಿರುವುದು ಹಾಗೂ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರ ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ ಇಳಿದಿದ್ದು, ಕೊಲೆಗಾರರ ರಕ್ಷಣೆಗೆ ನಿಂತಂತಿದೆ ಎಂದು ದೂರಿದ ಹಿಂದೂಪರ ಸಂಘಟನೆಗಳು ಈ ಕೃತ್ಯ ಖಂಡಿಸಿ, ಪ್ರತಿಭಟನೆಗೆ ಮುಂದಾಗಿದ್ದರು. ಘಟನೆ ಸ್ವರೂಪ ತೀವ್ರಗೊಂಡ ಹಿನ್ನೆಲೆಯಲ್ಲಿ ಯಾದಗಿರಿ ಎಸ್ಪಿ ಜಿ. ಸಂಗೀತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರೊಟ್ಟಿ ಕೇಳಿದ್ದು ತಪ್ಪಾ: ಯಾದಗಿರಿ ನಿವಾಸಿ ರಾಕೇಶ ಪ್ರತಿನಿತ್ಯ ಇನ್ನೊಬ್ಬರ ಹತ್ತಿರ ರೊಟ್ಟಿ ತೆಗೆದುಕೊಂಡು ಊಟ ಮಾಡುತ್ತಿದ್ದ. ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ಕೇಳಲು ಹೋಗಿದ್ದಾನೆ. ಆಗ, ಫಯಾಜ್ ಎಂಬಾತ ‘ನೀನು ಇನ್ನೊಬ್ಬರ ಮನೆ ಬಾಗಿಲು ಬಡೆದು ರೊಟ್ಟಿ ಕೇಳುತ್ತೀಯಾ’ ಎಂದು ಜಗಳವಾಡಿದ್ದಾನೆ. ರೊಟ್ಟಿ ಕೇಳಿದ್ದೆ ತಪ್ಪಾ. ಎಂಬುದಾಗಿ ಮಾತಿನ ಚಕಮಕಿಯಿಂದ ಜಗಳ ಅಂತ್ಯವಾಗಿದೆ. ಆದರೆ ಭಾನುವಾರ ಮಧ್ಯರಾತ್ರಿ 11 ಗಂಟೆಗೆ ಆರೋಪಿ ಫಯಾಜ್, ರಾಕೇಶನ ಮನೆಗೆ ತೆರಳಿ ಆತನಿಗೆ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾನೆ, ಈ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತದೆ. ಘಟನೆಯನ್ನು ತೀವ್ರ ಗತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಶಿಕ್ಷೆ ನೀಡಬೇಕು ಎಂದು ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಪ್ರತಿಕ್ರಿಯಿಸಿದ್ದಾರೆ.