ಸಾರಾಂಶ
-ಮಹಾನಾಯಕ ದಲಿತ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ । ಮನವಿ ಪತ್ರ ಸಲ್ಲಿಕೆ
------ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಹಿರಿಯೂರು ಪರಿಶ್ಚಂದ್ರಘಾಟ್ ಹತ್ತಿರದ ಮಾರುತಜ್ಜನ ಕಾಲೊನಿ ಅಲೆಮಾರಿ ಶಿಳ್ಳೇಕ್ಯಾತರ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಹಾಗೂ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ಒದಗಿಸುವಂತೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆಯಿಂದ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಹಿರಿಯೂರು ಮಾರುತಜ್ಜನ ಕಾಲೋನಿಯಲ್ಲಿ ತಿಳ್ಳೆಕ್ಯಾತರ 50 ಕುಟುಂಬಗಳು ದಶಕಗಳಿಂದ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಯಾರೊಬ್ಬರಿಗೂ ಸ್ವಂತ ನಿವೇಶನಗಳಿಲ್ಲ. ಶಿಳ್ಳೇಕ್ಯಾತರ ಹಿರಿಯ ಮುಖಂಡ ಕಾಲವಶವಾಗಿರುವ ಮಾರುತಜ್ಜನ ಹೆಸರಿನಲ್ಲಿ ಬಡಾವಣೆ ಇದೆ. ಸರ್ಕಾರಕ್ಕೆ ಸಂಬಂಧಿಸಿದ ಭೂ-ದಾಖಲೆಯಲ್ಲಿ 2 ಎಕರೆ ಮಾರುತಜ್ಜ ಬಡಾವಣೆ ಎಂದು ಈಗಲೂ ತೋರಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಸ್ಥಳೀಯ ನಗರಸಭೆಯವರಾಗಲಿ, ತಾಲೂಕಿನ ದಂಡಾಧಿಕಾರಿಗಳಾಗಲಿ ಈವರೆಗೆ ಅಲೆಮಾರಿಗಳಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡುವ ಪ್ರಯತ್ನಕ್ಕೆ ಕೈಹಾಕಿಲ್ಲ. ಇಲ್ಲಿ ಸ್ವಂತ ಆರ್ಥಿಕ ದುಡಿಮೆಯಿಂದ ಸುಭದ್ರವಾದ ಮನೆ ನಿರ್ಮಾಣ ಮಾಡಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಇದರಿಂದ ಕಾಲೋನಿಗೆ ರಸ್ತೆ, ಚರಂಡಿ, ಬೀದಿ ದೀಪ, ಕುಡಿವ ನೀರಿನ ಸೌಕರ್ಯ, ಬಾಲವಾಡಿ, ಪ್ರಾಥಮಿಕ ಶಾಲೆ, ಬ್ಯಾಂಕ್ ಸಾಲ, ವೃದ್ದಾಪ್ಯ ವೇತನ, ಕಲಾವಿದರ ಪಿಂಚಣೆ ಹೀಗೆ ಸಲ್ಲಬೇಕಾದ ಸವಲತ್ತು ಮತ್ತು ಇನ್ನಿತರೆ ಸೌಕರ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಪ್ರತಿಭಟನಾಕಾರರು ದೂರಿದರು.
ಮಾರುತಜ್ಜನ ಕಾಲೋನಿಯಲ್ಲಿ ನೆಲೆಸಿರುವ ಶಿಳ್ಳೇಕ್ಯಾತರ ಏಳೆಂಟು ಹುಡುಗರು 10ನೇ ತರಗತಿಯವರೆಗೆ, ಮೂವರು ಪಿಯುಸಿವರೆಗೆ ವ್ಯಾಸಂಗಮಾಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಹತ್ತಾರು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಜಗನ್ನಾಥ್ ಎಂಬುವರು ಮಾತ್ರ ಎರಡನೇ ವರ್ಷದ ಪದವಿ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಜೀವನೋಪಾಯಕ್ಕಾಗಿ ಆಟೋ ಚಾಲಕ ವೃತ್ತಿಯಲ್ಲಿ ತೊಡಗಿದ್ದಾರೆ. ಒಬ್ಬರು ಬಿಪಿಎಡ್ ವ್ಯಾಸಂಗ ಮಾಡಿ ಅನುದಾನರಹಿತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷರಾಗಿದ್ದಾರೆ. ಇಲ್ಲಿ ಯಾರೊಬ್ಬರೂ ಪದವಿ ಹಂತದ ಶಿಕ್ಷಣ ಪಡೆದವರಿಲ್ಲ.ಹದಿನೈದಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸರ್ಕಾರಿ ನೌಕರಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಾರೂ ಇಲ್ಲ. ಜಗನ್ನಾಥ್ ಅವರ ಹೆಂಡತಿಯಾದ ವಿಜಯಮ್ಮ (51) ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾಗಿ ಹಾಗೂ ಹರಿಶ್ಚಂದ್ರಘಾಟಿನ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರಸ್ವತಿ (28) ಎಂಬುವವರು ಚಿಕ್ಕದೊಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಇನ್ನೂ ಕೆಲವರು ವ್ಯಾಪಾರ, ಗಾರೆ ಕೆಲಸ, ಕೃಷಿ ಕೂಲಿಯಾಳು, ಸಣ್ಣಪುಟ್ಟ ಆಲಂಕಾರಿಕ ವಸ್ತುಗಳ ಮಾರಾಟ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಯಾರೊಬ್ಬರಿಗೂ ನಿಯತವಾಗಿ ಆರ್ಥಿಕ ಆದಾಯ ತಂದುಕೊಡುವ ನಿರ್ದಿಷ್ಠ ಉತ್ಪಾದನಾ ನೆಲೆಗಳಿಲ್ಲವೆಂದು ನೋವು ತೋಡಿಕೊಂಡರು.
ಅಲೆಮಾರಿ ಭಿಕ್ಷುಕರಾಗಿದ್ದ ಶಿಳ್ಳೇಕ್ಯಾತರು ಈಗ ಸ್ಥಿರ ಸಮುದಾಯವಾಗಿ ನೆಲೆಕಂಡುಕೊಳ್ಳುತ್ತಿದ್ದಾರೆ. ಹಿರಿಯೂರಿನ ಶಿಳ್ಳೇಕ್ಯಾತರು ತೊಗಲುಗೊಂಬೆ ಕುಣಿಸುವ ತಮ್ಮ ಕುಲವೃತ್ತಿ ಕೂಡಾ ಕೈಬಿಟ್ಟಿದ್ದಾರೆ. ಕುಲವೃತ್ತಿಯ ಪರಿಕರ ಮನೆಗಳಲ್ಲಿ ಪವಿತ್ರವೆಂದು ದೇವರ ಪಟ ಬಳಿಯಿಟ್ಟು ಪೂಜಿಸುತ್ತಾರೆ. ಇವರ ಮನೆಭಾಷೆ ಮರಾಠಿ, ಇವರು ಭಾರತ ದೇಶದಲ್ಲಿ ಎಲ್ಲಿಯೇ ನೆಲೆಸಿರಲಿ ಬೆಡಗು, ಆಚರಣೆ ಮತ್ತು ಸಂಪ್ರದಾಯ ಒಂದೇ ಆಗಿರುತ್ತವೆ. ಶಿಳ್ಳೇಕ್ಯಾತ ಸಮುದಾಯವನ್ನು ಕಿಳ್ಳೇಕ್ಯಾತ, ಬುಂಡೆಬೆಸ್ತ, ಕಟುಬು, ಕಟಬರ ಮುಂತಾದ ಬದಲಿ ಹೆಸರುಗಳಿಂದ ಕರೆಯಲಾಗುತ್ತಿದೆ. ತಿಳ್ಳೇಕ್ಯಾತ ಮತ್ತು ಕಿಳ್ಳೇಕ್ಯಾತ ಪದಗಳು ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ಶಿ ಮತ್ತು ಕಿ ಅಕ್ಷರಗಳ ಗೊಂದಲದಿಂದ ಎರಡು ಪದಗಳನ್ನು ಎರಡು ಪ್ರತ್ಯೇಕ ಜಾತಿಗಳೆಂದು ತಪ್ಪಾಗಿ ಗ್ರಹಿಸಿದ ಪರಣಾಮ ಶಿಳ್ಳೇಕ್ಯಾತ ಎಸ್ಪಿ ಪಟ್ಟಿಯಲ್ಲಿದ್ದರೆ, ಕಿಳ್ಳೇಕ್ಯಾತ ಎಂಬ ಹೆಸರನ್ನು ಪ್ರವರ್ಗ-1 ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗಾಗಿ, ಸೂಕ್ತ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಗೊಂದಲ ಮತ್ತು ಜಟಿಲತೆ ನಿವಾರಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.ಮಹಾನಾಯಕ ದಲಿತ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ತಾಳಿಕೇರೆ, ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಪಾಳ್ಯ, ರಾಜ್ಯ ಕಾರ್ಯದರ್ಶಿ ರವಿಕುಮಾರ್, ಕುಮಾರಸ್ವಾಮಿ, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ವೀಣಂ ರಾಮದಾಸ್, ಉಮಾದೇವಿ, ಸಗ್ಮಾ, ರಾಕೇಶ್, ಶಾರದಮ್ಮ, ಆನಂತರಾವ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
---------------ಪೋಟೋ:25 ಸಿಟಿಡಿ1
ಶಿಳ್ಳೇಕ್ಯಾತರ ಕುಟುಂಬಗಳಿಗೆ ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮಹಾ ನಾಯಕ ದಲಿತ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.--------