ರಾಮನಗರ: ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಎಸ್.ಮೂರ್ತಿರವರ ಅಧ್ಯಕ್ಷತೆಯಲ್ಲಿ ನಿಗದಿಯಾದ ಕುಂದು ಕೊರತೆ ಆಲಿಸುವ ಸಭೆಗೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಪಂ ಸಿಇಒ ಗೈರಾಗಿದ್ದಕ್ಕೆ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟಿಸಿ ಸಭೆ ಬಹಿಷ್ಕಾರಕ್ಕೆ ಮುಂದಾದ ಘಟನೆ ನಡೆಯಿತು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿಗಳು, ಎಸ್ಪಿ, ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ, ಸಂಘ ಸಂಸ್ಥೆಯ ಪದಾಧಿಕಾರಿಗಳ ಸಭೆ ಹಾಗೂ ಅಹವಾಲು ಸ್ವೀಕೃತಿ ಕಾರ್ಯಕ್ರಮ ನಿಗದಿಯಾಗಿತ್ತು.

ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯರವರ ಉಪಸ್ಥಿತಿಯಲ್ಲಿ ಸಭೆ ನಡೆಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಲಿತ ಮುಖಂಡರಾದ ಶಿವಕುಮಾರಸ್ವಾಮಿ, ರಾಂಪುರ ನಾಗೇಶ್, ಗೋವಿಂದಯ್ಯ, ಸುರೇಶ್ , ವೆಂಕಟೇಶ್ , ಹರೀಶ್ ಬಾಲು, ಕಿರಣ್ ಸಾಗರ್ ಮತ್ತಿತರರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್ಪಿ ಶ್ರೀನಿವಾಸ್ ಗೌಡ, ಜಿಪಂ ಸಿಇಒ ಅನ್ಮೋಲ್ ಜೈನ್ ಅವರೆಲ್ಲರು ಎಲ್ಲಿದ್ದಾರೆ. ಸಭೆಗೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರದಿದ್ದಾಗ ದಲಿತ ಮುಖಂಡರು, ಜಿಲ್ಲಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ವೇದಿಕೆ ಬಳಿಗೆ ಆಗಮಿಸಿದರು. ಮೂವರು ಹಿರಿಯ ಅಧಿಕಾರಿಗಳೇ ಇಲ್ಲದ ಮೇಲೆ ಸಭೆ ನಡೆಸಿ ಪ್ರಯೋಜನ ಏನು? ಸಭೆಯನ್ನು ಮುಂದೂಡಿ ಎಂದು ಪಟ್ಟು ಹಿಡಿದರು.

ಆಯೋಗದ ಅಧ್ಯಕ್ಷ ಡಾ.ಎಸ್.ಮೂರ್ತಿ ಅವರು, ಜಿಲ್ಲಾಧಿಕಾರಿಗಳ ವ್ಯಾಜ್ಯ ಸಂಬಂಧ ನ್ಯಾಯಾಲಯಕ್ಕೆ ಹೋಗಿದ್ದು, ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿ ಮುಖಂಡರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಇದನ್ನು ಒಪ್ಪದ ಮುಖಂಡರು, ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸಭೆಗೆ ಗೈರಾಗಿದ್ದಾರೆ. ದಲಿತರು, ಶೋಷಿತರು ಹಾಗೂ ಬಡವರನ್ನು ಕಂಡರೇ ಅವರಿಗೆ ಆಗುವುದಿಲ್ಲ ಎಂದು ಟೀಕಿಸಿದರು.


ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಸಮಾರಂಭವಾಗಲಿ ಅಥವಾ ಪೂರ್ವಭಾವಿ ಸಭೆಗಳಿಗಾಗಲಿ ಜಿಲ್ಲಾಧಿಕಾರಿಗಳು ಭಾಗವಹಿಸುವುದಿಲ್ಲ. ಜಿಲ್ಲಾಧಿಕಾರಿಗಳ ಕಟ್ಟಡ ಸುತ್ತ ನಿಷೇಧಾಜ್ಞೆ ಹೇರಿ ಪ್ರತಿಭಟನೆಗಳಿಗೆ ನಿರ್ಬಂಧ ಹೇರಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಇಂತಹ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಗೆ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಪಂ ಸಿಇಒ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿ ಯಶವಂತ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೆ, ಜಿಲ್ಲಾಧಿಕಾರಿಗಳು ಬರುವವರೆಗೆ ಸಭೆ ಮುಂದೂಡಬೇಕು. ಇಲ್ಲವೆ ಸಭೆ ಬಹಿಷ್ಕರಿಸಲು ಅನುಮತಿ ನೀಡಬೇಕೆಂದು ಪಟ್ಟು ಹಿಡಿದರು.

ಕೊನೆಗೆ ಡಾ.ಎಸ್.ಮೂರ್ತಿಯವರು, ಈ ಸಭೆ ನನ್ನ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದೆ. ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ನೀವು ಸಭೆ ಮುಂದುವರಿಸಲು ಅನುವು ಮಾಡಿಕೊಡಬೇಕೆಂದು ಮುಖಂಡರ ಮನವೊಲಿಸಿ ಸಂಘ ಸಂಸ್ಥೆಗಳು ಮತ್ತು ಜನರಿಂದ ಅಹವಾಲು ಆಲಿಸಿದರು.

ವೇದಿಕೆ ಏರಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು:

ದಲಿತ ಮುಖಂಡ ಗುಡ್ಡೆ ವೆಂಕಟೇಶ್ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರಡಿಗುಟ್ಟೆ ಗ್ರಾಮದಲ್ಲಿ ಮೇ 10ರಂದು ಸವರ್ಣಿಯರ ಗುಂಪು ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಿರುವ ವಿಚಾರ ಪ್ರಸ್ತಾಪಿಸಿ ಆಯೋಗದ ಅಧ್ಯಕ್ಷರ ಗಮನ ಸೆಳೆದರು.

ಕರಡಿಗುಟ್ಟೆ ಗ್ರಾಮಸ್ಥರು ಹಾಗೂ ಸಂತ್ರಸ್ತ ಮಹಿಳೆಯ ಕುಟುಂಬದವರು ಭಿತ್ತಿಪತ್ರ ಪ್ರದರ್ಶಿಸುತ್ತಾ ವೇದಿಕೆ ಏರಿ ನಮಗೆ ನ್ಯಾಯ ಕೊಡಿಸಬೇಕೆಂದು ಪಟ್ಟು ಹಿಡಿದರು. ಅಹವಾಲು ಆಲಿಸಿದ ಅಧ್ಯಕ್ಷ ಡಾ.ಎಸ್.ಮೂರ್ತಿರವರು ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಎಂ.ಕುಂಬಯ್ಯ, ಸುನೀಲ್ ಎಂ.ಉಕ್ಕಲಿ, ಎನ್.ದಿವಾಕರ್, ಕಾರ್ಯದರ್ಶಿ ಡಾ.ಎಚ್.ಎಸ್.ಶಿವರಾಮು ಮತ್ತಿತರರು ಹಾಜರಿದ್ದರು.

13ಕೆಆರ್ ಎಂಎನ್ 2,3.ಜೆಪಿಜಿ

2.ಜಿಪಂ ಸಭಾಂಗಣದಲ್ಲಿ ದಲಿತ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದು.

3.ಕರಡಿಗುಟ್ಟೆ ಗ್ರಾಮಸ್ಥರು ವೇದಿಕೆ ಏರಿರುವುದು.