ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನನಗರದ ಜಿಲ್ಲಾ ಎಸ್ಪಿ ಕಛೇರಿ ಸಂಭಾಂಗಣದಲ್ಲಿ ಗುರುವಾರ ಎಸ್ಪಿ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ, ಎಸ್ಟಿ ಸಭೆಯಲ್ಲಿ ಹಿಂದಿನ ಸಭೆಯಲ್ಲಿ ಸಲ್ಲಿಸಲಾದ ದೂರುಗಳ ಬಗ್ಗೆ ಗಮನಹರಿಸುತ್ತಿಲ್ಲ. ಪರಿಣಾಮವಾಗಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರಬಂದು ಅಂಬೇಡ್ಕರ್ ಪ್ರತಿಮೆ ಮುಂದೆ ಕುಳಿತು ಪ್ರತಿಭಟಿಸಿ ಮೆರವಣಿಗೆ ನಡೆಸಲಾಯಿತು.
ಇಂದಿನ ಸಭೆಯಲ್ಲಿ ಏನಾದರೂ ದೂರುಗಳಿದ್ದರೆ ತಿಳಿಸಬಹುದು ಎಂದು ಸಭೆಯಲ್ಲಿ ತಿಳಿಸಿದಾಗ ಸಭೆಯಲ್ಲಿದ್ದ ಹಿರಿಯ ದಲಿತ ಮುಖಂಡರಾದ ಹೆಚ್.ಕೆ.ಸಂದೇಶ ಸಮಯದಾಯದ ಪರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಸಭೆಗೆ ವಿವರ ನೀಡಿದರು. ಮಡೆನೂರಿನಲ್ಲಿ ದಲಿತರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು. ಹೋರಾಟಗಾರರು ಜಿಲ್ಲಾಡಳಿತದ ಗಮನಕ್ಕೆ ಹೋರಾಟದ ಮೂಲಕ ತಿಳಿಸಿದಾಗ ಜಿಲ್ಲಾಡಳಿತ ಮಾರ್ಚ್ ೩ರಂದು ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿತು. ಆದರೆ ಘಟನಾ ಸ್ಥಳಕ್ಕೆ ಡಿಸಿ, ಎಸ್ಪಿ, ತಹಸೀಲ್ದಾರ್ ಅವರು ಗೈರಾಗಿರುವ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತವಾದವು. ದೇವಾಲಯದ ಪ್ರವೇಶ ವೇಳೆ ದುರ್ಘಟನೆಗಳು ನಡೆದಿದ್ದರೆ ಯಾರು ಹೊಣೆ? ಹಿರಿಯ ಅಧಿಕಾರಿಗಳು ಏಕೆ ಸ್ಥಳಕ್ಕೆ ಬರಲಿಲ್ಲ? ಇದು ದಲಿತರ ಮೇಲೆ ನೀವು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯಲ್ಲವೇ ಎಂದು ಪ್ರಶ್ನಿಸಿದರು.ನಂತರ ಚನ್ನರಾಯಪಟ್ಟಣ ತಾಲೂಕಿನಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದವರೊಬ್ಬರ ಬೈಕ್‌ಅನ್ನು ಹಗಲಲ್ಲೇ ಸುಟ್ಟು ಹಾಕಿದ್ದಾರೆ. ಕೃತ್ಯ ಎಸಗಿರುವವರ ಮೇಲೆ ಕಾನೂನು ಕ್ರಮಕ್ಕೆ ದೂರು ನೀಡಿದರೂ ಅವರನ್ನು ಬಂಧಿಸಿ ಮತ್ತೆ ಬಿಟ್ಟು ಕಳುಹಿಸಿದ್ದೀರಿ. ಇದು ದಲಿತ ಮೇಲೆ ಅಧಿಕಾರಿಗಳ ಧೋರಣೆಯಲ್ಲವೇ ಎಂದು ಹಲವು ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಇನ್ನು ಆಲೂರು ತಾಲೂಕಿನಲ್ಲಿ ಕೆರೆಯ ನೀರನ್ನೇ ದಲಿತರು ಮುಟ್ಟುವುದಕ್ಕೆ ನಿರ್ಬಂಧ ಹೇರಿದರೂ ಯಾರ ಮೇಲೂ ಯಾವುದೇ ಕ್ರಮವಾಗಿಲ್ಲ. ಹೀಗೆ ದಲಿತರ ಮೇಲೆ ನಿರಂತರವಾಗಿ ಒಂದಲ್ಲ ಒಂದು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತಿದ್ದರೂ ಘಟನೆ ನಡೆದ ಸ್ಥಳಕ್ಕೆ ಎಸ್ಪಿಯಾಗಲಿ ಡೀಸಿಯಾಗಲಿ ಭೇಟಿ ನೀಡುವುದಿಲ್ಲ ಎಂದ ಮೇಲೆ ನಮಗೇಕೆ ಬೇಕು ಈ ಸಭೆ ಎಂದು ಒಕ್ಕೊರಲಿನಿಂದ ಮುಖಂಡರು ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು. ಸಭೆಯಿಂದ ಹೊರಬಂದ ದಲಿತ ಮುಖಂಡರು ಎಸ್ಪಿ ಕಛೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ನಿರ್ಲಕ್ಷವನ್ನು ಖಂಡಿಸಿದರು. ನಂತರ ಮೆರವಣಿಗೆ ಮೂಲಕ ಅಂಬೇಡ್ಕರ್ ಪ್ರತಿಮೆ ಮುಂಭಾಗ ಧರಣಿ ನಡೆಸಿ ದಲಿತರ ಮೇಲೆ ಜಿಲ್ಲಾಡಳಿತದ ನಿರ್ಲಕ್ಷ ಧೋರಣೆ ಹಾಗೂ ವೈಫಲ್ಯತೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ದಲಿತ ಮುಖಂಡರಾದ ಸೋಮಶೇಖರ್, ವಿಜಯಕುಮಾರ್, ಅಂಬುಗಮಲ್ಲೇಶ, ಪ್ರಸನ್ನ , ಶಿವಮ್ಮ ಮಾತನಾಡಿ, ಜಿಲ್ಲಾಡಳಿತದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಇದು ಹೀಗೆ ಮುಂದುವರೆದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹಿರಿಯ ದಲಿತ ಮುಖಂಡರಾದ ಸೋಮಶೇಖರ್, ಅರೇಹಳ್ಳಿ ನಿಂಗರಾಜು, ರಾಜಶೇಖರ್ ಭಾಗ್ಯ ಕಲೀವೀರ್, ಹೆತ್ತೂರು ನಾಗರಾಜು, ತೋಟೇಶ್ ನಿಟ್ಟೂರು, ಶಾಂತಿಗ್ರಾಮ ಚೇತನ್, ಪ್ರಕಾಶ್, ಕುಮಾರಸ್ವಾಮಿ, ಆನಂದ್, ಶಿವಕುಮಾರ್,ರಾಜು ಹೀಗೆ ಜಿಲ್ಲೆಯ ತಾಲೂಕು ಹೋಬಳಿಯ ಮುಖಂಡರು ಭಾಗವಹಿಸಿದ್ದರು.