ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು

| Published : Jan 13 2024, 01:33 AM IST

ಸಾರಾಂಶ

ಬುದ್ಧ, ಬಸವ, ಅಂಬೇಡ್ಕರ್‌ ಸೇರಿ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿರುವ ಅಗತ್ಯವಿದೆ ಎಂದು ಬೆಳವಿ ಶರಣಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬುದ್ಧ, ಬಸವ, ಅಂಬೇಡ್ಕರ್‌ ಸೇರಿ ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿರುವ ಅಗತ್ಯವಿದೆ ಎಂದು ಬೆಳವಿ ಶರಣಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕೊಟಬಾಗಿ ಗ್ರಾಮದ ದಾಸನಟ್ಟಿ ಪ್ಲಾಟ್‌ನ ಅಂಬೇಡ್ಕರ್‌ ಸಮುದಾಯ ಭವನ ಬಳಿ ಶುಕ್ರವಾರ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟವು ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ನಿಮಿತ್ತ ಏರ್ಪಡಿಸಿದ ಬೃಹತ್ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಲಿತರನ್ನು ಜಾಗೃತಿಗೊಳಿಸುವ ಇಂಥ ಕಾರ್ಯಕ್ರಮಗಳನ್ನು ರೂಪಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಶತ ಶತಮಾನಗಳಿಂದ ಧಾರ್ಮಿಕ ಮತ್ತು ಮೂಢನಂಬಿಕೆಗಳ ಕಟ್ಟಳೆಗಳನ್ನು ಹೇರಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಶೋಷಿಸಲಾಗುತ್ತಿದೆ. ಇದಕ್ಕೆ ಅಂತ್ಯಹಾಡಲು ಅಂಬೇಡ್ಕರರು ಸಂವಿಧಾನ ರಚಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ನಮ್ಮ ವಿಶ್ವಶ್ರೇಷ್ಠ ಭಾರತದ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದರು.

ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕ, ಸಂಘಟಕ ಸುರೇಶ ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ದಲಿತ ಸಮುದಾಯದ ಯುವಕರು, ಮಹಿಳೆಯರು ಸೇರಿ ಇಡೀ ಸಮಾಜದ ಸಂಘಟನೆ ಮತ್ತು ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಶೀಘ್ರವೇ ಹುಕ್ಕೇರಿಯಲ್ಲಿ ಪ್ರತಿಷ್ಠಾಪಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಐತಿಹಾಸಿಕ ಮತ್ತು ಸ್ಮರಣೀಯವಾಗಿ ದಾಖಲಾಗುವಂತೆ ಆಯೋಜಿಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯವ್ವಗೋಳ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಬಸವರಾಜ ಭೂಸಾರಿ, ಎಸ್ಸಿಎಸ್ಟಿ ದೌರ್ಜನ್ಯ ತಡೆ ಜಿಲ್ಲಾ ಸಮಿತಿ ಸದಸ್ಯ ಸಿದ್ಧರಾಯಿ ಮೇತ್ರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ, ಮುಖಂಡರಾದ ಶ್ರೀಕಾಂತ ತಳವಾರ, ಉದಯ ಹುಕ್ಕೇರಿ, ಸದಾಶಿವ ಕಾಂಬಳೆ, ಅಪ್ಪಣ್ಣಾ ಖಾತೇದಾರ, ಮಾರುತಿ ತಳವಾರ, ದೀಪಕ ವೀರಮುಖ, ಕುಮಾರ ತಳವಾರ, ಪ್ರಮೋದ ಹೊಸಮನಿ, ಅಕ್ಷಯ ವೀರಮುಖ, ಶಂಕರ ತಿಪ್ಪನಾಯಿಕ, ಯಲ್ಲಪ್ಪ ಡಪರಿ, ಮುತ್ತು ಕಾಂಬಳೆ, ಶಿವಾನಂದ ಮರಿನಾಯಿಕ, ಶಿವು ಕಣಗಲಿ, ಬಾಳು ಕೋಳಿ, ಸಂತೋಷ ಗಸ್ತಿ, ಉಮೇಶ ಮಾಳಗೆ, ಸುಶೀಲ ಹತ್ತರಗಿ, ಹಣಮಂತ ಹಕ್ಕೆನ್ನವರ, ಬಸವರಾಜ ಹುಲ್ಲೋಳಿ ಮತ್ತಿತರರು ಉಪಸ್ಥಿತರಿದ್ದರು.

ಧೂಪದಾಳದ ಸಂತೋಷ ದೊಡಮನಿ ಉಪನ್ಯಾಸ ನೀಡಿದರು. ಸಮಾಜ ಸೇವೆಗೆ ಅನುಪಮ ಕೊಡುಗೆ ನೀಡಿದ ದಲಿತ ಮುಖಂಡರು, ನ್ಯಾಯವಾದಿಗಳು, ಪತ್ರಕರ್ತರು, ಗ್ರಾಮ ಪಂಚಾಯಿತಿ ಸದಸ್ಯರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಪ್ರಜ್ವಲ ದಾನಪ್ಪಗೋಳ ಸ್ವಾಗತಿಸಿದರು. ಶಿಕ್ಷಕ ರಾಜು ತಳವಾರ ನಿರೂಪಿಸಿದರು. ಬಳಿಕ ನಡೆದ ಭಾಷಣ ಸ್ಪರ್ಧೆ, ಮುಕ್ತ ನೃತ್ಯ ಸ್ಪರ್ಧೆಗಳು ಗಮನ ಸೆಳೆದವು.