ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ (ಬಿಡದಿ ಟೌನ್ ಶಿಪ್ ) ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದರು.

ಟೌನ್ ಶಿಪ್ ಯೋಜನೆ ಜಾರಿ ಕುರಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ಜಂಗೀಕುಸ್ತಿ ನಡುವೆಯೇ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮೊದಲ ಹಂತದ ಪಾದಯಾತ್ರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ರೈತರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಬೆಳಗ್ಗೆ 10 ಗಂಟೆಗೆ ಆರಂಭವಾಗ ಬೇಕಿದ್ದ ಪಾದಯಾತ್ರೆ ಒಂದೂವರೆ ತಾಸು ತಡವಾಗಿ ಪ್ರಾರಂಭವಾಯಿತು. ಪಾದಯಾತ್ರೆಗೆ ಚಾಲನೆ ನೀಡಲು ಅಂಚಿಪುರ ಗ್ರಾಮಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಬರ ಮಾಡಿಕೊಂಡರು.


ಅಂಚಿಪುರ ಗ್ರಾಮದ ಶಕ್ತಿ ದೇವತೆ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ, ಪಕ್ಷದ ಕಾರ್ಯಕರ್ತರು ಮತ್ತು ರೈತರೊಂದಿಗೆ ನಮ್ಮ ಭೂಮಿ - ನಮ್ಮ ಹಕ್ಕು ಘೋಷಣೆಯೊಂದಿಗೆ ಹೆಜ್ಜೆ ಹಾಕಿ ಪಾದಯಾತ್ರೆಗೆ ಚಾಲನೆ ನೀಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಅರಕಲುಗೂಡು ಕ್ಷೇತ್ರ ಶಾಸಕ ಎ.ಮಂಜು, ಹುಣಸೂರು ಕ್ಷೇತ್ರ ಶಾಸಕ ಜಿ.ಡಿ.ಹರೀಶ್ ಕುಮಾರ್, ಕೆ.ಆರ್.ಪೇಟೆ ಕ್ಷೇತ್ರ ಶಾಸಕ ಎಚ್.ಟಿ.ಮಂಜು , ದೇವದುರ್ಗ ಕ್ಷೇತ್ರ ಶಾಸಕಿ ಕರೇಮ್ಮ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಸುರೇಶ್ ಗೌಡ ಅವರೆಲ್ಲರೂ ನಿಖಿಲ್ ಅವರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು.

ಎರಡೂವರೆ ಸಾವಿರ ಜನರು ಭಾಗಿ;

ಇಷ್ಟೇ ಅಲ್ಲದೆ, ಪಕ್ಷದ ಮಹಿಳಾ ಘಟಕ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಈ ಭಾಗದ ವಯೋವೃದ್ಧರು, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಎರಡೂವರೆ ಸಾವಿರ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ತಾಲೂಕು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಪಕ್ಷದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿದರು.

ಪಾದಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಪಾದಯಾತ್ರೆಗೆ ಚಾಲನೆ ನೀಡಿದ ನಾಯಕರು ಒಟ್ಟಾಗಿ ಹೆಜ್ಜೆ ಹಾಕಿದರು. ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬು ಸೇರಿದಂತೆ ಅನೇಕ ನಾಯಕರು ಮುನ್ನಡೆದು ಕಾರ್ಯಕರ್ತರಲ್ಲಿ ಜೋಶ್ ತುಂಬುತ್ತಿದ್ದರು. ಪಾದಯಾತ್ರಿಗಳಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ, ಫವನು ಬಯಸದೆ ಸೇವೆಯ ಪೂಜೆಯು ಕರ್ಮವೆ ಇಹ ಪರ ಸಾಧನವು..., ರೈತ ರೈತ ರೈತ ಅನ್ನ ಕೊಡುವ ದಾತ..., ನನ್ನ ಮಣ್ಣಿದು, ನನ್ನ ಮಣ್ಣಿದು , ನನ್ನ ಮಣ್ಣಿದು ಕನ್ನಡ ಮಣ್ಣು, ನನ್ನುಸಿರಲ್ಲಿ ಕಂಪಿಸೋ ಮಣ್ಣು...ರೈತ ಗೀತೆಗಳು ನೆರೆದಿದ್ದವರನ್ನು ಪಾದಯಾತ್ರಿಗಳನ್ನು ಹುರಿದುಂಬಿಸಿದವು.

ಅಂಚಿಪುರದಿಂದ ಆರಂಭವಾದ ಪಾದಯಾತ್ರೆ ಅಂಚಿಪುರ ಕಾಲೋನಿ ಮಾರ್ಗವಾಗಿ ಬನ್ನಿಗಿರಿ ಗ್ರಾಮಕ್ಕೆ ಮಧ್ಯಾಹ್ನ ಪ್ರವೇಶಿಸಿತು. ನಿಖಿಲ್ ಕುಮಾರಸ್ವಾಮಿ , ಸುರೇಶ್ ಬಾಬು ಸೇರಿ ಎಲ್ಲ ನಾಯಕರು ಭೋಜನ ಸೇವಿಸಿ ಕೆಲಕಾಲ ವಿಶ್ರಾಂತಿ ಪಡೆದರು.

ಆನಂತರ ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಮೂಲಕ ಪಾದಯಾತ್ರೆಯೂ ಹೊಸೂರು ಗ್ರಾಮ ಪ್ರವೇಶಿಸಿತು. ರಾತ್ರಿ ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ 11 ಕಿಲೋ ಮೀಟರ್ ಗಳ ಮೊದಲ ಹಂತದ ಪಾದಯಾತ್ರೆ ಸಮಾಪ್ತಿಗೊಂಡಿತು.

ನಿಖಿಲ್ ಗೆ ಆಶೀರ್ವಾದ ಮಾಡಿದ ವಯೋವೃದ್ದರು:

ಅಂಚಿಪುರ ಹಳ್ಳಿಯಿಂದ ಪ್ರಾರಂಭಗೊಂಡು ಹೊಸೂರು ಗ್ರಾಮದವರೆಗೆ ಒಟ್ಟು 8 ಗ್ರಾಮಗಳಲ್ಲಿ ಪಾದಯಾತ್ರೆಯಲ್ಲಿ ಬಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರತಿ ಹಳ್ಳಿಗಳಲ್ಲಿ ವಯೋವೃದ್ದರು ಆಶೀರ್ವಾದ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಗ್ರಾಮದಿಂದ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಿದಾಗ ಕಾದು ನಿಂತಿದ್ದ ವಯೋವೃದ್ದರು ನಿಖಿಲ್ ಅವರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಿದ್ದರು. ನಮ್ಮ ಭೂಮಿನ ಉಳಿಸಿಕೊಡಪ್ಪ, ಕೊನೆ ಉಸಿರು ಇರೊವರೆಗೆ ನಿನ್ನನ್ನ ಮರೆಯಲ್ಲ, ನೀನು ಎಲ್ಲಿಗೆ ಬಾ ಅಂತ ಹೇಳ್ತಿಯೊ ಅಲ್ಲಿಗೆ ಬರ್ತೀವಿ... ಎಂದು ವಯೋವೃದ್ದರು ನಿಖಿಲ್ ಅವರಲ್ಲಿ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಪಾದಯಾತ್ರೆಗೆ ಪುಟಾಣಿಗಳು ಸಾಥ್ :

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಮಾತ್ರವಲ್ಲದೆ ಸಣ್ಣ ಮಕ್ಕಳು ಸಹ ಹೆಜ್ಜೆ ಹಾಕಿದರು.

ಪಾದಯಾತ್ರೆಗೆ ಕುಟುಂಬದವರೊಂದಿಗೆ ಆಗಮಿಸಿದ ಪುಟಾಣಿಗಳು ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಧಿಕ್ಕಾರ, 6 ಲಕ್ಷ ಮರಗಳು, ಹೈನುಗಾರಿಕೆ ಮಾಡುವ ರೈತರನ್ನು ಉಳಿಸೋಣ, ಭೂ ಸ್ವಾಧೀನಕ್ಕೆ ನಮ್ಮ ಧಿಕ್ಕಾರ ಎಂಬ ಟೌನ್ ಶಿಪ್ ವಿರುದ್ಧದ ಭಿತ್ತಿ ಪತ್ರಗಳನ್ನು ಹಿಡಿದು ಗಮನ ಸೆಳೆದರು. ಇನ್ನು ಯುವಕರು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಜೆಡಿಎಸ್ ಬಾವುಟ ಬಳಸಲಿಲ್ಲ :

ಅಂಚಿಪುರದಿಂದ ಹೊಸೂರುವರೆಗೆ 8 ಗ್ರಾಮಗಳಲ್ಲಿ ನಡೆದ ಪಾದಯಾತ್ರೆಯಲ್ಲಿ ಎಲ್ಲಿಯೂ ಜೆಡಿಎಸ್ ಪಕ್ಷದ ಬಾವುಟಗಳನ್ನು ಬಳಸಲಿಲ್ಲ. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೆಲ್ಲರು ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಹೆಜ್ಜೆ ಹಾಕಿದರು.

ಪಾದಯಾತ್ರೆ ಸಾಗಿದ ರಸ್ತೆಗಳಲ್ಲಾಗಲಿ ಅಥವಾ ಕಾರ್ಯಕರ್ತರ ಕೈಯಲ್ಲಾಗಲಿ ಜೆಡಿಎಸ್ ಪಕ್ಷದ ಬಾವುಟಗಳು ಕಾಣಿಸಲೇ ಇಲ್ಲ.