ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್ ಮೆಂಟ್ ಪಾರ್ಕ್‌ನಿಂದ ಅಣೆಕಟ್ಟೆ ಹಾಗೂ ನದಿ ಪರಿಸರಕ್ಕೆ ಹಾನಿ ಉಂಟಾಗಲಿದೆ. ಇದನ್ನು ವಿರೋಧಿಸಲು ಜಾಗೃತರಾಗಬೇಕಿದೆ ಎಂದು ರೈತ ನಾಯಕಿ ಸುನಂದಾ ಜಯರಾಂ ತಿಳಿಸಿದರು.ತಾಲೂಕಿನ ಕೆಆರ್‌ಎಸ್ ಗ್ರಾಪಂ ಆವರಣದಲ್ಲಿ ಸಭೆ ನಡೆಸಿ ಮಾತನಾಡಿ, ಮೈಸೂರು ಮಹಾರಾಜರು ನಮ್ಮ ರೈತರ ಬೆಳೆಗಳಿಗಾಗಿ ಹಾಗೂ ಕುಡಿಯುವ ನೀರಿಗಾಗಿ ಅಣೆಕಟ್ಟೆಯನ್ನು 1911ರಲ್ಲಿ ನಿರ್ಮಿಸಿ ಸುಮಾರು 92 ವರ್ಷಗಳೇ ಕಳೆದು ಹೋಗಿವೆ. ನೂರು ವರ್ಷ ಅಣೆಕಟ್ಟೆ ಸುರಕ್ಷಿತ ಎಂದು ತಜ್ಣರು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಅಣೆಕಟ್ಟೆಗೆ ಪರ್ಯಾಯವಾಗಿ ಅಣೆಕಟ್ಟೆ ನಿರ್ಮಾಣದ ಬಗ್ಗೆ ಯೋಜನೆ ಮಾಡುವುದನ್ನು ಬಿಟ್ಟು ಅಣೆಕಟ್ಟೆಗೆ ಧಕ್ಕೆಯಾಗುವ ಹಾಗೂ ಪರಿಸರಕ್ಕೆ ಮಾರಕವಾಗುವ ಬೃಂದಾವನ ಮೇಲ್ದರ್ಜೆ ಎಂಬ ಹೆಸರಿನಲ್ಲಿ ಸುಮಾರು 2600 ಕೋಟಿ ರು. ವೆಚ್ಚದಲ್ಲಿ 34 ವರ್ಷ ಪಿಪಿಟಿ ಮಾದರಿಯಲ್ಲಿ ಖಾಸಗಿಯವರಿಗೆ ಕೊಡುತ್ತಿದೆ. ಇದು ಅಣೆಕಟ್ಟೆ ಭದ್ರತೆ ನಿಯಮದ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಾಹನ ನಿಲ್ದಾಣಕ್ಕೆ 24 ಎಕರೆ ಜಮೀನನ್ನು ರೈತರಿಂದ ಪಡೆಯಲು ಸಭೆ ನಡೆಸಿದ್ದಾರೆ. ಇನ್ನೂ ಪ್ರತಿನಿತ್ಯ ಬರುವ ಪ್ರವಾಸಿಗರ ಅನುಪಯುಕ್ತ ನೀರು ಎಲ್ಲಿ ಹೋಗುತ್ತದೆ. ಬೇರೆ ರೀತಿಯಲ್ಲಿ ನದಿ ಸೇರುತ್ತದೆ. ಇದರಿಂದ ಜಲ ಮಾಲಿನ್ಯ ಉಂಟಾಗುತ್ತದೆ ಎಂದರು.
ಈ ಯೋಜನೆಯಿಂದ ಜನರ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ಮುಚ್ಚಿಟ್ಟ ಸರ್ಕಾರ ಕೇವಲ ವೈಯಕ್ತಿಕ ಪ್ರತಿಷ್ಠೆಗಾಗಿ ಈ ಯೋಜನೆ ಮಾಡುತ್ತಿದೆ. ಸ್ಥಳೀಯರಿಗೆ ಕೆಲಸ ಸಿಗುವುದು ಕಷ್ಟ ಎಂದು ತಿಳಿಸಿದರು.ಜಿಲ್ಲೆಯ ರೈತ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ಮಾಡುತ್ತಿವೆ. ಜನರಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿಂದ ಆಗುವ ಪರಿಣಾಮಗಳ ಕುರಿತು ರಾಜ್ಯದ ಹಲವು ತಜ್ಞರಿಂದ ಕಾರ್ಯಕ್ರಮ ನಡೆಸುತ್ತಿದ್ದು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ರೈತ ಮುಖಂಡ ಇಂಡವಾಳು ಚಂದ್ರಶೇಖರ್ ಮಾತನಾಡಿ, ಸುಪ್ರೀಂಕೋರ್ಟ್ ಅಣೆಕಟ್ಟೆ 20 ಕಿಮೀ ದೂರದಲ್ಲಿ ಗಣಿಗಾರಿಕ ನಿಷೇಧ ಮಾಡಿದೆ. ಆದರೆ, ಅಣೆಕಟ್ಟೆ ಬದಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸುವುದು ಪರಿಸರಕ್ಕೆ ವಿರುದ್ಧವಾಗಿದೆ. ಇನ್ನೂ ಜಿಲ್ಲಾಡಳಿತ ಅಣೆಕಟ್ಟೆ ನದಿ ತೀರದ 200 ಮೀಟರ್ ನಲ್ಲಿ ಕೆಲವು ಹೋಂ ಸ್ಟೇ ಹೆಸರಿನಲ್ಲಿ ರೆಸಾರ್ಟ್ ಗೆ ಅನುಮತಿ ನೀಡಿದೆ. ಇದನ್ನು ರದ್ದುಗೊಳಿಸಬೇಕು. ನಾವು ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.ಕೆ.ಆರ್.ಸಾಗರ ಗ್ರಾಪಂ ಪ್ರಭಾರ ಅಧ್ಯಕ್ಷ ರವಿಶಂಕರೇಗೌಡ, ರೈತ ಮುಖಂಡ ಬೋರಯ್ಯ, ದಲಿದ ಸಂಘರ್ಷ ಸಮಿತಿ ಎಂ.ವಿ.ಕೃಷ್ಣ, ಜಯಕರ್ನಾಟಕ ಸಂಘಟನೆ ನಾರಾಯಣ, ಗ್ರಾಪಂ ಸದಸ್ಯರಾದ ಕೆ.ರಾಜು, ವಸಂತಕುಮಾರ್, ಮೂರ್ತಿ, ಮುಖಂಡರಾದ ನಾಗರಾಜು, ಪಳನಿ ಸೇರಿ ಇತರರು ಇದ್ದರು.