ಸಾರಾಂಶ
ವೈಶಿಷ್ಟ್ಯತೆ, ಸಂಪ್ರದಾಯಿಕ ಪದ್ದತಿಯಲ್ಲಿ ಸಂಭ್ರಮದಿಂದ ಹಬ್ಬ ಆಚರಣೆ
ಗೌಳಿ ದೊಡ್ಡಿಗಳಲ್ಲಿ ಜಾತ್ರೆಯ ವಾತಾವರಣ ನಿರ್ಮಾಣಸಂತೋಷ ದೈವಜ್ಞಕನ್ನಡಪ್ರಭ ವಾರ್ತೆ ಮುಂಡಗೋಡ
ಹಿಂದೂ ಧರ್ಮದ ಶ್ರೇಷ್ಟ ಹಬ್ಬಗಳಲ್ಲೊಂದಾದ ನವರಾತ್ರಿ ಉತ್ಸವ ವಿಜಯ ದಶಮಿ ಹಬ್ಬವನ್ನು ರಾಜ್ಯ ಹಾಗೂ ದೇಶದ ಮೂಲೆ ಮೂಲೆಯಲ್ಲಿ ಒಂದೊಂದು ರೀತಿಯಾಗಿ ಆಚರಿಸಲಾಗುತ್ತದೆ. ರಾಜ್ಯದ ಮೈಸೂರು ಹಾಗೂ ಬೆಂಗಳೂರು ಕಡೆಗೆ ದಸರಾ ಎಂದು ಆಚರಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ನವರಾತ್ರಿ ಉತ್ಸವ, ಮಹಾನವಮಿ ಇನ್ನುಳಿದೆಡೆ ವಿಜಯ ದಶಮಿ, ನವರಾತ್ರಿ ಉತ್ಸವ ಆಯುಧ ಪೂಜೆ ಸೇರಿದಂತೆ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಆಚರಿಸುತ್ತಾರೆ. ಅದೇ ನವರಾತ್ರಿ ಉತ್ಸವ ಈಗ ಉಪವಾಸ ವ್ರತ, ಪೂಜೆ ಪುನಸ್ಕಾರದೊಂದಿಗೆ ಎಲ್ಲೆಡೆ ನಡೆಯುತ್ತಿದೆ. ಒಂಬತ್ತು ದಿನಗಳ ಕಾಲ ದೀಪ ಹಾಕಿ ಧಾರ್ಮಿಕ ವಿಧಿ ವಿಧಾನ ವಿಶೇಷ ಪೂಜೆಯೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಆದರೆ ದನಗರ ಗೌಳಿ ಜನಾಂಗ ಮಾತ್ರ ವಿಜಯ ದಶಮಿ ಹಬ್ಬವನ್ನು ತಮ್ಮದೇ ಆದ ವೈಶಿಷ್ಟ್ಯತೆ, ಸಂಪ್ರದಾಯಿಕ ಪದ್ದತಿಯಲ್ಲಿ ಸಿಲೋಗನಾ ಎಂಬ ಹೆಸರಿನಲ್ಲಿ ಆಚರಿಸುವುದು ವಿಶೇಷ. ಪಾಂಡುರಂಗನ ಆರಾಧ್ಯ ಭಕ್ತರಾದ ದನಗರ ಗೌಳಿಗರು ಮೂಲ ಹೈನುಗಾರರು. ಹಾಲು, ಮೊಸರು ವ್ಯಾಪಾರವೇ ಇವರ ಕುಲಕಸುಬಾಗಿದ್ದು, ಅರಣ್ಯ ಪ್ರದೇಶದಲ್ಲಿ ವಾಶಿಸುವ ಗೌಳಿಗರು ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ದನಕರುಗಳನ್ನೇ ಅವಲಂಬಿಸಿ ಜೀವನ ಸಾಗಿಸುವ ಇವರನ್ನು ದನಗರ ಗೌಳಿಗರು ಎಂದು ಕರೆಯುತ್ತಾರೆ. ಖಾಯಂ ಅರಣ್ಯವಾಸಿಯಾಗಿರುವ ಗೌಳಿಗರು ಕಾಡು ಪ್ರಾಣಿಗಳಿಂದ ತಮ್ಮನ್ನು ಜಾನುವಾರುಗಳೆ ರಕ್ಷಿಸುತ್ತವೆ ಎಂಬ ನಂಬಿಕೆ ಹೊಂದಿದ್ದು, ಹಾಗಾಗಿ ದನಗರುಗಳಿಗೆ ಮೇವು ಒದಗಿಸುವ ಅರಣ್ಯ ಪ್ರದೇಶದ ಗಿಡ ಮರಗಳನ್ನು ದೇವರೆಂದೇ ಭಾವಿಸಿ ಪೂಜಿಸುತ್ತಾರೆ. ವರ್ಷಪೂರ್ತಿ ಹೈನುಗಾರಿಕೆಯಲ್ಲಿ ನಿರತರಾಗಿರುವ ಗೌಳಿಗರಿಗೆ ವಿಜಯ ದಸಮಿ ಹಬ್ಬ ಬಂದರೆ ಸಂಭ್ರಮವೋ ಸಂಭ್ರಮ.
೧೦ ದಿನ ಹಬ್ಬ:ಗೌಳಿಗರು ವಿಜಯ ದಶಮಿ ಹಬ್ಬವನ್ನು ೧೦ ದಿನಗಳ ಕಾಲ ಆಚರಿಸುತ್ತಾರೆ. ನಿತ್ಯ ಗೌಳಿ ದೊಡ್ಡಿಗಳಲ್ಲಿ ಧಾರ್ಮಿಕ ವಿಧಾನದೊಂದಿಗೆ ಹೋಮ-ಹವನ, ಪೂಜೆಗಳು ನಡೆಯುತ್ತವೆ. ಕೆಲ ಗೌಳಿ ಧಾರ್ಮಿಕ ಗುರುಗಳ ಮೇಲೆ ದೇವರು ಆವರಿಸುತ್ತದೆ. ಹೇಳಿಕೆಗಳು ನಡೆಯುತ್ತವೆ. ಈ ಸಂದರ್ಭ ಕೇಳಿದ ಬೇಡಿಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ಮೊದಲೆಂಟು ದಿನಗಳ ಕಾಲ ಗೌಳಿಗರ ದೊಡ್ಡಿಯ ಪ್ರತಿಯೊಂದು ಮನೆಯಲ್ಲಿ ಒಬ್ಬರು ಉಪವಾಸ ವ್ರತ ಮಾಡುತ್ತಾರೆ. ಈ ವೇಳೆಯಲ್ಲಿ ನಿತ್ಯ ಮರಾಠಿ ಭಾಷಿಕ ಗೀತೆಯೊಂದಿಗೆ ಗಜ್ಜಾ ಕುಣಿತ ಹಾಗೂ ಪುಗುಡಿ ನೃತ್ಯ ನಡೆಯುತ್ತವೆ. ಈ ಅವಧಿಯಲ್ಲಿ ದೊಡ್ಡಿಯ ಎಲ್ಲ ಗೌಳಿಗರು ಕಡ್ಡಾಯವಾಗಿ ತಲೆಗೆ ಪಗೋಡಾ (ಪೇಟಾ) ಧರಿಸಿಕೊಂಡು ಕುಣಿಯುತ್ತಾರೆ. ರಾತ್ರಿ ವೇಳೆಯಲ್ಲಿ ಪಂಜಿನ ಮೆರವಣಿಗೆ ನಡೆಯುತ್ತದೆ. ೯ ದಿನ ತಮ್ಮ ತಮ್ಮ ಮನೆಯಲ್ಲಿ ಹಬ್ಬ ಆಚರಿಸಿ ೧೦ನೇ ದಿನ ಗೌಳಿ ದೊಡ್ಡಿಯ ಗೌಳಿಗರೆಲ್ಲ ಸಾಮೂಹಿಕವಾಗಿ ಸಿಲೋಗನಾ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ.
೧೧ನೇ ದಿನಕ್ಕೆ ಸುತ್ತಮುತ್ತಲಿನ ದೊಡ್ಡಿಯ ಗೌಳಿಗರೆಲ್ಲ ಒಂದು ಕಡೆ ಸೇರಿ ಮೈಮೇಲೆ ಮಜ್ಜಿಗೆ ಸುರಿದುಕೊಂಡು ಸ್ನಾನ ಮಾಡಿ ತಮ್ಮ ಆರಾಧ್ಯ ದೈವ ಪಾಂಡುರಂಗ(ವಿಠೋಬ) ದೇವರನ್ನು ಜಪಿಸಿ ಅತಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿ ಸುತ್ತಮುತ್ತಲಿನ ಅರಣ್ಯದ ಗಿಡ ಮರಗಳಿಗೆ ಹಾಗೂ ಸಾಕು ದನ, ಎಮ್ಮೆ, ಕರುಗಳಿಗೆ ಪೂಜೆ ಮಾಡುತ್ತಾರೆ. ಬಳಿಕ ಬನ್ನಿ ಮುಡಿದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾ ಹಾಲು, ಬೆಣ್ಣೆಯಿಂದ ತಯಾರಿಸಲಾದ ಸಿಹಿ ತಿನಿಸುಗಳೊಂದಿಗೆ ಸಾಮೂಹಿಕವಾಗಿ ಭೋಜನ ಸೇವಿಸಲಾಗುತ್ತದೆ. ತದನಂತರ ಹಬ್ಬದ ಸಮಾರೋಪ ಗೀತೆಯೊಂದಿಗೆ ನವರಾತ್ರಿ ಉತ್ಸವ(ಸಿಲೋಗನಾ) ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.ರಾಜ್ಯದಲ್ಲಿಯೇ ಅತಿ ಹೆಚ್ಚು ಗೌಳಿ ಜನಾಂಗವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆ ಮುಂಡಗೊಡ ತಾಲೂಕಿನ ಗೌಳಿ ದೊಡ್ಡಿಗಳಲ್ಲಿ ಈ ಹಬ್ಬದ ವಿಶೇಷತೆಯೇ ಬೇರೆ. ಸುಮಾರು ೧೧ ದಿನಗಳ ಕಾಲ ನಿರಂತರವಾಗಿ ಅತಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುವ ಗೌಳಿ ದೊಡ್ಡಿಗಳಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ. ಇಲ್ಲಿ ಸುಮಾರು ೨೭ ಗೌಳಿ ದೊಡ್ಡಿಗಳಿದ್ದು, ಎಲ್ಲ ದೊಡ್ಡಿಗಳಲ್ಲಿ ಕೂಡ ಅಷ್ಟೇ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ.