ಚನ್ನಪಟ್ಟಣ: ಭರತನಾಟ್ಯ ಭಾರತದ ಪ್ರಾಚೀನ ಮತ್ತು ಶ್ರೇಷ್ಠ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಈ ಕಲೆಯು ಕೇವಲ ಮನರಂಜನೆಗೆ ಸೀಮಿತವಾಗದೆ ಶಿಸ್ತು, ಏಕಾಗ್ರತೆ, ಸಂಸ್ಕಾರ ಮತ್ತು ಆತ್ಮವಿಶ್ವಾಸ ಬೆಳೆಸುವ ಮಾಧ್ಯಮ ಎಂದು ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಸಂಸ್ಥಾಪಕ ಎಂ.ಸಿ.ಸುಜೇಂದ್ರ ಬಾಬು ಹೇಳಿದರು

ಚನ್ನಪಟ್ಟಣ: ಭರತನಾಟ್ಯ ಭಾರತದ ಪ್ರಾಚೀನ ಮತ್ತು ಶ್ರೇಷ್ಠ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಈ ಕಲೆಯು ಕೇವಲ ಮನರಂಜನೆಗೆ ಸೀಮಿತವಾಗದೆ ಶಿಸ್ತು, ಏಕಾಗ್ರತೆ, ಸಂಸ್ಕಾರ ಮತ್ತು ಆತ್ಮವಿಶ್ವಾಸ ಬೆಳೆಸುವ ಮಾಧ್ಯಮ ಎಂದು ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಸಂಸ್ಥಾಪಕ ಎಂ.ಸಿ.ಸುಜೇಂದ್ರ ಬಾಬು ಹೇಳಿದರು.

ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ ಸೆಂಟರ್ ಟ್ರಸ್ಟ್‌ನಿಂದ ಭರತನಾಟ್ಯ, ಸಂಗೀತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಭಾರತೀಯ ಪರಂಪರೆಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಭರತನಾಟ್ಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ಭರತನಾಟ್ಯ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ನಾಟ್ಯಶಾಸ್ತ್ರದ ಜ್ಞಾನವನ್ನು ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ್ ಮುಖಾಂತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಭರತನಾಟ್ಯದ ಮಹತ್ವ ಪರಿಚಯಿಸುತ್ತಿರುವುದು ಮಾದರಿ ಕಾರ್ಯ ಎಂದರು.

ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತ ರಾಮಸ್ವಾಮಿ ಮಾತನಾಡಿ, ಭರತನಾಟ್ಯ ಕೇವಲ ನೃತ್ಯವಲ್ಲ, ಅದು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಮೌಲ್ಯಗಳ ಪ್ರತಿಬಿಂಬವಾಗಿದೆ. ವಿದ್ಯಾರ್ಥಿಗಳು ಇಂತಹ ಶಾಸ್ತ್ರೀಯ ಕಲಾಪ್ರಕಾರಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಲ್ಪಶ್ರೀ ನೃತ್ಯ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ಅಂಗಗಳು, ಹಸ್ತಮುದ್ರೆಗಳು, ಭಾವಾಭಿನಯ ಹಾಗೂ ಸಾಂಪ್ರದಾಯಿಕ ನೃತ್ಯ ಪ್ರಸ್ತುತಿಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು. ಭರತನಾಟ್ಯದ ಇತಿಹಾಸ, ಮಹತ್ವ ಹಾಗೂ ಅದರ ವೈಶಿಷ್ಟ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಇದೇ ವೇಳೆ ನೃತ್ಯ ಗುರು ಎಂ.ಸಿ. ಸುಜೇಂದ್ರ ಬಾಬು, ಸಮಾಜಸೇವಕಿ ಶಾಂತ ರಾಮಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಕೆ. ಪುರುಷೋತ್ತಮ ಹಾಗೂ ಆಶಾ ಪುರುಷೋತ್ತಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಹೇಮಂತ್ ಕುಮಾರ್, ಶಿಕ್ಷಕರಾದ ಲತಾ ಬಿ.ಕೆ., ಮಧುಸೂದನ, ರಶ್ಮಿ, ಶಶಿರೇಖಾ, ಶಶಿಕುಮಾರ್, ರಾಜಣ್ಣ, ಕಾಲೇಜಿನ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

ಪೊಟೋ೧೭ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭರತನಾಟ್ಯ ನೃತ್ಯ ಸಂಗೀತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.