ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಣ್ಣ ಬಣ್ಣದ ವಿದ್ಯುತ್ ದೀಪಗಳ ಮೆರುಗಿನಲ್ಲಿ ಮೂಡಿಬಂದ ನೃತ್ಯ ಕಲಾವಿದೆಯರ ನೃತ್ಯ ವೈಭವ ಪ್ರೇಕ್ಷಕ ಕಣ್ಣಿಗೆ ಹಬ್ಬವನ್ನುಂಟುಮಾಡಿತ್ತು. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಲಯಬದ್ಧವಾಗಿ ನಾಟ್ಯಶ್ಸಾಸ್ತ್ರದ ವಿವಿಧ ಭಾವ-ಭಂಗಿಗಳನ್ನು ಪ್ರದರ್ಶಿಸಿದ ನೃತ್ಯಗಾರ್ತಿಯರು ದೇವಲೋಕವನ್ನೇ ಸೃಷ್ಟಿಸಿದ್ದರು. ಕಣ್ಮನ ಸೆಳೆಯುವ ನಾಟ್ಯ ಪ್ರದರ್ಶನ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.ನಗರದ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಗುರುದೇವೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ಅದ್ಭುತವಾಗಿ ಮೂಡಿಬಂದಿತು. ನಗರದ ವಿವೇಕಾನಂದ ರಂಗಮಂದಿರದಲ್ಲಿ ಸಂಜೆ ೪ ರ ಬಳಿಕ ನೃತ್ಯಲೋಕವೇ ಸೃಷ್ಟಿಯಾಗುತ್ತಿತ್ತು. ನೃತ್ಯ ಕಲಾವಿದೆಯರು ಒಬ್ಬರನ್ನೊಬ್ಬರು ಮೀರಿಸುವಂತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದರು. ನವರಸಗಳನ್ನು ಅವಾಹನೆ ಮಾಡಿಕೊಂಡವರಂತೆ ನರ್ತಿಸಿದರು. ಕ್ಲಿಷ್ಟಕರವೆನಿಸುವಂತಹ ಭಾವ-ಭಂಗಿಗಳನ್ನು ನಿರಾಯಾಸವಾಗಿ ತೋರುತ್ತಾ ನೋಡುಗರ ಹೃದಯಗೆದ್ದರು.
ಪುಟ್ಟ ಪುಟ್ಟ ಕಲಾವಿದೆಯರೂ ಅನುಭವಿ ನೃತ್ಯಕಲಾವಿದೆಯರಿಗೆ ಸರಿಸಮನಾಗಿ ನರ್ತಿಸಿ ಭರತನಾಟ್ಯದ ಸೊಬಗಿಗೆ ಮೆರುಗು ನೀಡಿದರು. ಬೆಳಕಿನ ವಿನ್ಯಾಸವೂ ನೃತ್ಯದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅದ್ಭುತ ಭಾವಾಭಿನಯ, ಕಣ್ಣೋಟ ಜೊತೆಗೆ ವೈವಿಧ್ಯಮಯ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು.ಕಾರ್ಯಕ್ರಮದಲ್ಲಿ ಬೆಂಗಳೂರು ಭಾಷ್ಯಾಂಗ ನೃತ್ಯಾಲಯದ ವಿದುಷಿ ಎಂ.ಎಸ್.ಸಿಂಧುರಾವ್ ಅವರು ಮೈಸೂರಿನ ಅರಮನೆಗಳಲ್ಲಿ ಇರುವ ನಾಟ್ಯಮಂಟಪಗಳ ಅಧ್ಯಯನ ಕುರಿತು ಪ್ರಬಂಧ ಮಂಡಿಸಿದರೆ, ನೃತ್ಯ ಮತ್ತು ಬೆಳಕಿನ ವಿನ್ಯಾಸದ ಬಗ್ಗೆ ಧ್ವನಿ ಬೆಳಕು ವಿನ್ಯಾಸಕಾರ ಎಂ.ಎಲ್.ರಾಜನ್ ಪ್ರಬಂಧ ಮಂಡಿಸಿದರು.
ನಂಜನಗೂಡು ನಟರಾಜ ನಾಟ್ಯ ಶಾಲೆಯ ವಿದುಷಿ ರಮ್ಯ ರಾಘವೇಂದ್ರ ಮತ್ತು ಶಿಷ್ಯರು ಭರತನಾಟ್ಯ ಪ್ರದರ್ಶನ ನೀಡಿದರು. ನಂತರ ನೋಯ್ಡಾದ ನೃತ್ಯ ಗುರುಕುಲ್ ಕಲಾತ್ಮಕ ನಿರ್ದೇಶಕಿ ಅಕ್ಷತ ಪೈ ಅವರು ಏಕವ್ಯಕ್ತಿ ಭರತನಾಟ್ಯ ಪ್ರದರ್ಶಿಸಿದರು. ಗುರುದೇವ ಅಕಾಆಡೆಮಿಯ ಬೇಬಿ ಐನಾ ಸೋಮಯ್ಯ ಏಕವ್ಯಕ್ತಿ ಭರತನಾಟ್ಯ ಪ್ರದರ್ಶಿಸಿದರೆ, ಗುರುದೇವ ಅಕಾಡೆಮಿ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಬೆಳಕು ವಿನ್ಯಾಸಕಾರ ಎಂ.ಎಲ್.ರಾಜನ್ ಮತ್ತು ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಬಿದನೂರ್ ವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಯಿತು.