ಸಾರಾಂಶ
ಗದಗ: ಇಂದಿನ ದಿನಗಳಲ್ಲಿ ಮಕ್ಕಳು ದೇಶಿಯ ಕಲೆಗಳಿಂದ ದೂರಾಗುತ್ತಿದ್ದು, ಪಾಲಕರು ಮಕ್ಕಳಿಗೆ ಮೋಬೈಲ್ ನೀಡದೆ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಧಾರವಾಡದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯ ನಿರ್ದೇಶಕಿ ನಾಗರತ್ನ ಹಡಗಲಿ ಹೇಳಿದರು.
ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ನಾಟ್ಯಾಂಜಲಿ-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಟ್ಯಕಲೆ ನಮ್ಮ ದೇಶದ ಸಂಸ್ಕೃತಿಯಾಗಿದ್ದು, ಪಾಲಕರು ಮಕ್ಕಳಿಗೆ ನೃತ್ಯ ಕಲೆಗಳಲ್ಲಿರುವ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯು ವರ್ಷದಿಂದ ವರ್ಷಕ್ಕೆ ಹೆಚ್ಚು ಕ್ರೀಯಾಶೀಲವಾಗಿ ಜಿಲ್ಲಾದ್ಯಂತ ಶಿಬಿರ ಸ್ಥಾಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಬೆಳೆಸುವ ಅಕಾಡೆಮಿ ಆಗಲಿ ಎಂದು ಹಾರೈಸಿದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ಈ ಹಿಂದೆ ನಾಟ್ಯ ಕಲೆ ರಾಜರುಗಳ ಗೌರವವಾಗಿತ್ತು ಆದರೆ, ಈಗ ಸರ್ಕಾರದಿಂದ ಅದನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.ಈ ವೇಳೆ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ ನಿರ್ದೇಶಕಿ ಜ್ಯೋತಿಶ್ರೀ. ಎಂ.ಎಲ್ ಅಧ್ಯಕ್ಷತೆ ವಹಿಸಿದ್ದರು. ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯ ಡಾ. ನಾರಾಯಣ ಹಿರೇಕೊಳಚಿ, ಅಮೃತ ಭಾತಖಂಡೆ, ವಿಜಯಲಕ್ಷ್ಮೀ ಪುರಾಣಿಕ, ಷಡಾಕ್ಷರಿ. ಟಿ.ವಿ ಸೇರಿದಂತೆ ಮುಂತಾದವರು ಇದ್ದರು. ಸಂಗೀತ ಶಿಕ್ಷಕಿ ನಾಗರತ್ನಾ ಕುಂಬಾರ ನಿರೂಪಿಸಿದರು.ಆ ನಂತರ ಮಕ್ಕಳಿಂದ ನಾಟ್ಯಾಂಜಲಿ ಕಾರ್ಯಕ್ರಮ ಜರುಗಿತು.