ಸಾರಾಂಶ
ರಾಮರಾಜಕಾರಣದಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ರೈತರು, ಕೃಷಿಕರು ಬೀದಿಗೆ ಬೀಳುವಂತಾಗಿದೆ.
ಹಗರಿಬೊಮ್ಮನಹಳ್ಳಿ: ಯುವಜನರ ಉದ್ಯೋಗ ಕಸಿದ ಕೇಂದ್ರ ಸರ್ಕಾರವನ್ನು ಜನರು ಸ್ಪಷ್ಟವಾಗಿ ತಿರಸ್ಕರಿಸಬೇಕು ಎಂದು ಸಿಪಿಎಂ ಪಕ್ಷದ ರಾಜ್ಯಸಮಿತಿ ಸದಸ್ಯ ಯು. ಬಸವರಾಜ ಮನವಿ ಮಾಡಿದರು.
ತಾಲೂಕಿನ ತಂಬ್ರಹಳ್ಳಿಯಲ್ಲಿ ಸಿಪಿಎಂ ಪಕ್ಷದಿಂದ ಲೋಕಸಭಾ ಚುನಾವಣೆ ಹಿನ್ನೆಲೆ ನಡೆದ ರಾಜಕೀಯ ಪ್ರಚಾರಾಂದೋಲನ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರಾಮರಾಜಕಾರಣದಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ರೈತರು, ಕೃಷಿಕರು ಬೀದಿಗೆ ಬೀಳುವಂತಾಗಿದೆ. ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದೆ. ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಬದುಕಿಗಾಗಿ ಪರದಾಡುವಂತಾಗಿದೆ. ದೇಶದಲ್ಲಿ ಕೋಮುವಾದಿ ಶಕ್ತಿಗಳಿಂದ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದರು.ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಲೋಕಸಭೆಯಲ್ಲಿ ಕೋಮುವಾದಿ ಶಕ್ತಿಗಳನ್ನು ತಿರಸ್ಕರಿಸುವ ಮೂಲಕ ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಬೇಕಿದೆ. ದೇಶದಲ್ಲಿ ರೈತರು, ಕೃಷಿ ಕಾರ್ಮಿಕರ ವಿರೋಧಿ ನೀತಿಗಳನ್ನು ಕೇವಲ ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ಬದಲಿಸಿದೆ. ಕೇಂದ್ರ ಸರ್ಕಾರ ರೈತರು ಭೂಮಿ ಮಾರಿ ಬಂಡವಾಳಶಾಹಿಗಳ ಕಂಪನಿಗಳಲ್ಲಿ ಕೂಲಿ ಸೇರುವಂತೆ ಮಾಡುತ್ತಿವೆ ಎಂದು ಹರಿಹಾಯ್ದರು.
ರಾಜ್ಯ ಸಮಿತಿ ಸದಸ್ಯ ಆರ್.ಎಸ್. ಬಸವರಾಜ, ತಾಲೂಕು ಸಮಿತಿಯ ಎಸ್. ಜಗನ್ನಾಥ ಮಾತನಾಡಿದರು. ತಾಲೂಕು ಸಮಿತಿಯ ಅಂಜಿನಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಡುಚಪ್ಪ, ಚಾಂದ್‌ಬಿ, ಹುಲುಗಪ್ಪ. ಹನುಮಂತಪ್ಪ ಯಮುನಮ್ಮ ಇತರರಿದ್ದರು.