ಸಾರಾಂಶ
ದರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ದರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿದರು.17 ಲಕ್ಷ ರು. ವೆಚ್ಚದ ಸಂಜೀವಿನಿ ಕಟ್ಟಡ, 20 ಲಕ್ಷ ರು. ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ರಸ್ತೆ, 12 ಲಕ್ಷ ರು. ವೆಚ್ಚದಲ್ಲಿ ಕೆಲ್ಲಪುತ್ತಿಗೆಯಲ್ಲಿ ರುದ್ರಭೂಮಿ ಹಾಗೂ 15 ಲಕ್ಷ ರು. ವೆಚ್ಚದಲ್ಲಿ ದರೆಗುಡ್ಡೆ ನರಂಗೊಟ್ಟು ಎಂಬಲ್ಲಿ ರುದ್ರಭೂಮಿ ಹಾಗೂ ರಸ್ತೆ ಕಾಮಗಾರಿಗಳನ್ನು ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಲ್ಲಿ ರಾಜ್ಯ, ದೇಶದ ಅಭಿವೃದ್ಧಿಯಾದಂತೆ. ಪ್ರಸಕ್ತ ಸರ್ಕಾರ ಅನುದಾನಗಳನ್ನು ನೀಡುವಲ್ಲಿ ವಿಫಲವಾಗುತ್ತಿದ್ದು, ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟು ಅನುದಾನಗಳು ಲಭ್ಯವಾಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಲವಾರು ಕೋಟಿ ರು. ಅನುದಾನವನ್ನು ಕ್ಷೇತ್ರಕ್ಕೆ ಒದಗಿಸಿ ಸರ್ವ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಆದರೆ ಇಂದು ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇರುವ ಬಗ್ಗೆ ಅವರು ತಿಳಿಸಿದರು.ದರೆಗುಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಸಭಾಧ್ಯಕ್ಷತೆ ವಹಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂತಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ., ಪಂಚಾಯಿತಿ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಮುನಿರಾಜ ಹೆಗ್ಡೆ, ಪ್ರಸಾದ್, ಸಂತೋಷ್ ಪೂಜಾರಿ, ದೀಕ್ಷಿತ್ ಪಣಪಿಲ, ತುಳಸಿ ಮೂಲ್ಯ, ಶಶಿಕಲಾ, ಶಾಲಿನಿ, ಸಂಜೀವಿನಿ ತಾಲೂಕು ಸಂಯೋಜಕ ನಿಖಿಲ್, ಒಕ್ಕೂಟ ಅಧ್ಯಕ್ಷೆ ಪ್ರೇಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೀಕ್ಷಿತ್ ಪಣಪಿಲ ಸ್ವಾಗತಿಸಿದರು. ನಯನ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಸ್ಪರ್ಧಾ ವಿಜೇತರು ಮತ್ತು ಡಿಜಿಟಲ್ ಸಾಕ್ಷರತಾ ಪ್ರಮಾಣ ಪತ್ರ ಪಡೆದವರ ಹೆಸರುಗಳನ್ನು ವಾಚಿಸಿದರು. ಎಂ.ಬಿ.ಕೆ. ಮಾನಸ ವಂದಿಸಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.