ಸಾರಾಂಶ
ಆನಂದಪುರ: ಮನಸ್ಸಿನ ಒಳಗಿನ ಕತ್ತಲು ದೂರವಾಗಿಸಲು ನಮ್ಮೊಳಗಿನ ಮಾನವೀಯತೆ ಜಾಗೃತಗೊಳ್ಳಬೇಕಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು.
ಸಮೀಪದ ಮುರುಘಮಠದಲ್ಲಿ ಗುರುವಾರ ನಡೆದ ಕಂಚಿನ ದೀಪೋತ್ಸವ ಹಾಗೂ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನದೊಳಗಿನ ಕತ್ತಲೆ ಕರಗಲು ಸೂರ್ಯನಾರಾಯಣನ ಕೃಪೆ ಅಗತ್ಯ. ಹೊರಗಿನ ಕತ್ತಲು ಕಳೆಯಲು ಸೂರ್ಯನ ಆಸರೆಯ ಅತ್ಯಗತ್ಯವಾಗಿದೆ. ಮನುಷ್ಯನ ಆತ್ಮ, ಮನಸ್ಸು ಶುದ್ಧಿ ಇದ್ದರೆ ನಮ್ಮ ಹೃದಯದೊಳಗೆ ಭಗವಂತನನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರೂ ಭಗವಂತನ ಆರಾಧನೆಯ ಮಾಡುವ ಜಾಗೃತಿ, ಮನದೊಳಗಿನ ಪರಮಾತ್ಮನ ಬಗ್ಗೆಯೂ ವಿಶ್ವಾಸವಿರಬೇಕು. ನಾವು ಮಾಡುವಂತಹ ಒಳ್ಳೆಯ ಕೆಲಸಗಳೇ ನಿಮ್ಮೊಳಗಿನ ಭಗವಂತನಾಗಿದ್ದಾನೆ ಎಂದು ತಿಳಿಸಿದರು.
ಗುರುಗಳ ಮಾರ್ಗದರ್ಶನ ಸಿಕ್ಕಾಗ ಮಾತ್ರ ನಾವು ಕೈಗೊಳ್ಳುವ ಪೂಜೆ ಸಾರ್ಥಕವಾಗುತ್ತದೆ. ಶರಣ ಸಾಹಿತ್ಯ ಸಮ್ಮೇಳನ ಬದುಕಿನ ಮಾರ್ಗವನ್ನು ತೋರಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಶುದ್ಧವಾದ ಮನಸ್ಸು ಸಚ್ಚಾರಿತ್ರ್ಯದ ಬದುಕು ಲೌಕಿಕ ಬದುಕಿನಲ್ಲಿ ಅತ್ಯಗತ್ಯವಾಗಿದೆ ಎಂದರು.ಮುರುಘ ಮಠದಲ್ಲಿ ನಡೆಯುವ ಕಂಚಿನ ದೀಪೋತ್ಸವ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಕಾರಣ ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ ನಡೆಯುವ ಶರಣು ಸಾಹಿತ್ಯ ಹಾಗೂ ಭಾವೈಕ್ಯ ಸಮ್ಮೇಳನಂತಹ ಕಾರ್ಯಕ್ರಮಗಳು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಕೆಳದಿ ಅರಸರು ನೀಡಿದ ಕಂಚಿನ ರಥ ದೀಪೋತ್ಸವ ಭಕ್ತರ ಮನದ ಕತ್ತಲನ್ನು ಕಳೆದು ಬೆಳಕನ್ನು ನೀಡುವ ಸಂಕೇತವಾಗಿದೆ. ಶ್ರೀ ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಭಾವೈಕ್ಯ ಸಮ್ಮೇಳನಗಳೊಂದಿಗೆ ಸಾಧಕರಿಗೆ ಸನ್ಮಾನ, ಅನ್ನದಾಸೋಹ ಜ್ಞಾನದಾಸೋಹ ಹಾಗೂ ಆರೋಗ್ಯ ದಾಸೋಹಂತಹ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಮನುಷ್ಯ ಬದುಕನ್ನು ಪ್ರೀತಿಸಿ ಗೌರವಿಸುವ ಜೊತೆಗೆ ಸಾರ್ಥಕತೆ ಪಡಿಸಿಕೊಳ್ಳಬೇಕೆಂದರು.ಇದೇ ವೇಳೆ ಬೆಂಗಳೂರಿನ ಐಕ್ಯಾಟ್ ಏರ್ ಆಂಬ್ಯುಲೆನ್ಸ್ ಸಂಸ್ಥಾಪಕ ನಿರ್ದೇಶಕಿ ಡಾ.ಶಾಲಿನಿ ನಾಲ್ವಾಡ್ ಅವರಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಜಿ.ನಾಗೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪ ಅವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ ನೀಡಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ ಕಣ್ಣೂರ್, ವಿ.ಟಿ.ಸ್ವಾಮಿ, ಶಿಲ್ಪಾ ಪಾಟೀಲ್, ಲಿಂಗಸ್ವಾಮಿ ಗೌಡ್ರು, ಸುಜಯ್ ಆಲವಳ್ಳಿ, ಶುಭಾಷ್ ಕೌತಳ್ಳಿ, ಕೆ.ಬಿ.ದಾನೇಶ್, ಶೇಖರಯ್ಯ ಇವರುಗಳಿಗೆ ಗುರು ರಕ್ಷ ನೀಡಿ ಗೌರವಿಸಲಾಯಿತು.ಹಾಸ್ಯ ಭಾಷಣಕಾರ ಉಡುಪಿ ಸಂಧ್ಯಾ ಶೆಣೈ ವಿಶೇಷ ಉಪನ್ಯಾಸ ನೀಡಿದರು. ಕುಂದಗೋಳಿ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ, ಡಾ.ಆರ್.ಸಿ.ಜಗದೀಶ್, ದೀಪಾ ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ್, ಹೊಸನಗರ ಮಾಜಿ ಶಾಸಕ ಸ್ವಾಮಿ ರಾವ್ ಸೇರಿದಂತೆ ವಿವಿಧ ಮಠಗಳಿಂದ ಮಠಾಧೀಶರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕಂಚಿನ ರಥ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.;Resize=(128,128))
;Resize=(128,128))
;Resize=(128,128))
;Resize=(128,128))