ಸಾರಾಂಶ
ಶಿವರಾತ್ರಿ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಯಲ್ಲಿ ಜನಪದ ಉತ್ಸವಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವನಾಮ ಸಪ್ತಾಹದ 95ನೇ ಶಿವರಾತ್ರಿ ಮಹೋತ್ಸವ ಅಂಗವಾಗಿ ಬುಧವಾರ ನಗರದ ಪ್ರಮುಖ ಬೀದಿಯಲ್ಲಿ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಹಾಗೂ ಜನಪದ ಉತ್ಸವ ನಡೆಯಿತು.ಶ್ರೀ ಕಬೀರಾನಂದಸ್ವಾಮಿ ಮಠದಿಂದ ಆರಂಭವಾದ ಉತ್ಸವಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಓಂಕಾರ್ ಚಾಲನೆ ನೀಡಿದರು. ವಿವಿಧ ರೀತಿಯ ಹೂಗಳಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿ ಪೀತಾಂಬರ ಧರಿಸಿ ಕೈಯಲ್ಲಿ ರುದ್ರಾಕ್ಷಿ ಹಿಡಿದು ವಿರಾಜಮನರಾದ ಶಿವಲಿಂಗಾನಂದ ಶ್ರೀಗಳು ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ದರ್ಶನ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭಗಳ ಹೊತ್ತುಸಾಗಿದರು.
ವೀರಗಾಸೆ, ಕೀಲು ಕುದುರೆ, ತಮಟೆ, ಜಾಂಜ್ ನೃತ್ಯ, ಕಿನ್ನರ ಜೋಗಿ, ಚಂಡೆ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್ ಬ್ಯಾಂಡ್, ಕಹಳೆ, ಉರಿಮೆ, ಗೂರವಪ್ಪ, ಛತ್ರಿ ಚಾಮರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸಿ ಕಲಾ ಪ್ರತಿಭೆ ಮೆರೆದರು.ಜ್ಞಾನ ವಿಕಾಸ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ, ಶ್ರೀ ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು ಬಿಇಡಿ, ಪಿಯು ಕಾಲೇಜು ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಕಬೀರಾನಂದ ಸ್ವಾಮಿ ಆಂಗ್ಲ ಮತ್ತು ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ರಾಜ್ಯದ ಉಡುಗೆ ತೊಡುವುದರ ಮೂಲಕ ಭಾವೈಕ್ಯತೆ ಮೆರೆದಿದ್ಧಾರೆ.
ಉತ್ಸವ ನಗರದ ಕಬೀರಾನಂದಾಶ್ರಮದಿಂದ ಪ್ರಾರಂಭವಾಗಿ ದೊಡ್ಡ ಗರಡಿ ರಸ್ತೆ, ದೊಡ್ಡಪೇಟೆ, ಮೈಸೂರ್ ಕೆಫೆ, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಸಂತೇಪೇಟೆ ವೃತ್ತ, ಮೈಸೂರ್ ಬ್ಯಾಂಕ್ ವೃತ್ತ, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತದಿ ಮರಳಿ ಶ್ರೀಮಠ ತಲುಪಿತು. ದಾರಿಯುದ್ದಕ್ಕೂ ಭಕ್ತರು ಶ್ರೀಗಳಿಗೆಗೌರವ ಸಮರ್ಪಣೆ ಮಾಡಿದರು.ಸಮಾರಂಭದಲ್ಲಿ ಮುಖಂಡರಾದ ಗೋಪಾಲಸ್ವಾಮಿ ನಾಯಕ, ಪ್ರಶಾಂತ್, ನಾಗರಾಜ್ ಸಂಗಂ, ರಮೇಶ್, ಸತೀಶ್, ರುದ್ರೇಶ್ ಪ್ರಭಂಜನ್, ಪೈಲ್ವಾನ್ ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಗಣಪತಿಶಾಸ್ತ್ರಿ, ತಿಪ್ಪೇಸ್ವಾಮಿ, ಯೋಗಿಶ್ ಮಂಜುನಾಥ್ ಗುಪ್ತ ಸೇರಿ ಇತರರು ಭಾಗವಹಿಸಿದ್ದರು.