ಸಾರಾಂಶ
- ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ । ಸೆ.5ಕ್ಕೆ ಮುಂದಿನ ವಿಚಾರಣೆಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಮನೆಯಿಂದ ಊಟ ಪಡೆಯಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.ಮನೆಯಿಂದ ಊಟ, ಹಾಸಿಗೆ ಮತ್ತು ಪುಸ್ತಕ ಪಡೆಯಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಅಧೀಕ್ಷಕರಿಗೆ ನಿರ್ದೇಶಿಸುವಂತೆ ನಟ ದರ್ಶನ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಸರ್ಕಾರದ ಪರ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಮನೆಯಿಂದ ಊಟ, ಹಾಸಿಗೆ ಹಾಗೂ ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 2024ರ ಆ.14ರಂದು ರಾಜ್ಯ ಸರ್ಕಾರ ತಿರಸ್ಕರಿಸಿ ಅಂದೇ ಆ ಆದೇಶದ ಬಗ್ಗೆ ದರ್ಶನ್ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.ದರ್ಶನ್ ಪರ ವಕೀಲರಾದ ಸಂಜೀವಿನಿ, ಸರ್ಕಾರದ ಆದೇಶದ ಪ್ರತಿ ಈವರೆಗೂ ನಮಗೆ ತಲುಪಿಲ್ಲ. ಆದೇಶ ಪರಿಶೀಲಿಸಿ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂಬ ಮನವಿಗೆ ಸಮ್ಮತಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿತು.
ದರ್ಶನ್ ಅವರ ಈ ತಕರಾರು ಅರ್ಜಿಯನ್ನು 2024ರ ಜು.31ರಂದು ಹೈಕೋರ್ಟ್ ವಿಚಾರಣೆ ನಡೆಸಿತ್ತು. ಮನೆ ಊಟ ಪಡೆಯಲು ಅನುಮತಿ ಕೋರಿ ದರ್ಶನ್ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದ್ದರು. ಅದನ್ನು ಪರಿಗಣಿಸಿದ್ದ ಹೈಕೋರ್ಟ್, ದರ್ಶನ್ ಮನವಿ ಮೇಲೆ ಸರ್ಕಾರ ತೀರ್ಮಾನ ಕೈಗೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆ.20ಕ್ಕೆ ಮುಂದೂಡಿತ್ತು.ಸರ್ಕಾರದ ಆದೇಶದಲ್ಲೇನಿದೆ?: ದರ್ಶನ್‌ಗೆ ಪುಡ್ ಪಾಯಿಸನ್ ಆಗಿಲ್ಲ. ಅವರಿಗೆ ಮೂಳೆ ಮತ್ತು ವೈರಲ್ ಜ್ವರದಿಂದ ಬಳಲುತ್ತಿದ್ದರು. ಆ ಸಮಸ್ಯೆಗೆ ಚಿಕಿತ್ಸೆ ನೀಡಲಾಗಿದೆ. ಅದನ್ನು ಬಿಟ್ಟು ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ. ಔಷಧಿ ಮತ್ತು ಪೌಷ್ಟಿಕ ಆಹಾರ ಸೇವಿಸಲು ದರ್ಶನ್‌ಗೆ ವೈದ್ಯರು ಸಲಹೆ ನೀಡಿದ್ದಾರೆ. ಜತೆಗೆ, ಬೆನ್ನು ನೋವು ಮತ್ತು ಮುಂಗೈಗಳಿಗೆ ಚಿಕಿತ್ಸೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ. ಸದ್ಯ ಯಾವುದೇ ಪೌಷ್ಟಿಕಾಂಶದ ಕೊರತೆಯೂ ಇಲ್ಲ. ದರ್ಶನ್ ಉಳಿವಿಗೆ ಮನೆ ಊಟ ಅಗತ್ಯ ಎಂದು ವೈದ್ಯರು ಹೇಳಿಲ್ಲ. ಆದ್ದರಿಂದ ಅವರ ಅರ್ಜಿ ತಿರಸ್ಕರಿಸಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.