ರಾಯಚೂರಿನ ದರ್ವೇಶ ಗ್ರೂಪ್‌ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಮೂರು ಜನ ಆರೋಪಿತರನ್ನು 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ವಾಪಸ್ಸು ಕರೆದುಕೊಂಡು ಹೋಗುತ್ತಿರುವ ಪೊಲೀಸ್‌ ಹಾಗೂ ಸಿಐಡಿ ಅಧಿಕಾರಿಗಳು.

ಕನ್ನಡಪ್ರಭ ವಾರ್ತೆ ರಾಯಚೂರು

ಹೆಚ್ಚಿನ ಬಡ್ಡಿ ಆಸೆ ತೋರಿಸಿ ಜನರಿಂದ ಕೋಟ್ಯಾಂತರ ರುಪಾಯಿ ಹೂಡಿಕೆ ಮಾಡಿಸಿಕೊಂಡು ಬಡ್ಡಿ, ಅಸಲು ವಾಪಸ್ಸು ನೀಡದೇ ವಂಚಿಸಿರುವ ದರ್ವೇಶ ಗ್ರೂಪ್‌ ಕಂಪನಿ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸೋಮವಾರ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರ ಮುಂದೆ ಹಾಜರು ಪಡಿಸಿದ್ದು, ಎ.1 ಬಬ್ಲು (ಮೊಹಮ್ಮದ ಶಾಮೀದ್‌ ಅಲಿ) ಅವರನ್ನು ಐದು ದಿನಗಳ ಕಾಲ ಸಿಐಡಿ ಕಸ್ಟಡಿಗೆ ವಹಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳಾದ ಮೋಸಿನ್‌ ಮತ್ತು ಅಜರ್ ವಿಚಾರಣೆ ಕಾಯ್ದಿರಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಕಳೆದ ಮೂರು ದಿನಗಳಿಂದ ರಾಯಚೂರು ನಗರದಲ್ಲಿ ಬೀಡುಬಿಟ್ಟಿರುವ ಸಿಐಡಿ ತಂಡವು, ಮೂರು ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ರವಿವಾರ ರಾತ್ರಿ ಸ್ಥಳೀಯ ಎಲ್ಬಿಎಸ್‌ನಗರ ಹಾಗೂ ಪೋತ್ಗಲ್‌ ರಸ್ತೆಯಲ್ಲಿರುವ ಬಬ್ಲೂ ಹಾಗೂ ಮೋಸಿನ್ ಮನೆಗಳ ಮೇಲೆ ದಾಳಿ ಮಾಡಿ ಸುಮಾರು 2ಕ್ಕೂ ಅಧಿಕ ಕೋಟಿ ಮೌಲ್ಯದ ನಗದು, ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ಬಹುಕೋಟಿ ಮೌಲ್ಯದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ವೇಶ ಕಂಪನಿ ಸಂಚಾಲಕರಾದ ಮೊಹಮ್ಮದ ಹುಸೇನ್‌ ಶುಜಾ, ಸೈಯದ್‌ ವಸೀಂ, ಸೈಯದ್‌ ಮಿಸ್ಕೀನ್ ಹಾಗೂ ಬಬ್ಲು ಅವರ ವಿರುದ್ಧ ಎಲ್‌ಬಿಎಸ್‌ ನಗರದ ಚಂದ್ರು ಜಿಲ್ಲೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಅದೇ ರೀತಿ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ವಿಷ ಕುಡಿದಿದ್ದ ವೆಂಕಟೇಶ ಅವರು ಮಾರ್ಕೇಯಾರ್ಡ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಇದನ್ನಾಧರಿಸಿ ತನಿಖೆ ಆರಂಭಿಸಿರುವ ಸಿಐಡಿ ತಂಡವು ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನಾಪತ್ತೆಯಾಗಿರುವ ಕಂಪನಿ ಮುಖ್ಯಸ್ಥ ಮಹಮ್ಮದ್ ಹುಸೇನ್‌ ಶುಜಾರನ್ನು ಹಿಡಿಯಲು ಪೊಲೀಸ್ ಹಾಗೂ ಸಿಐಡಿ ಅಧಿಕಾರಿಗಳು ತೀವ್ರ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.