ಸಾರಾಂಶ
ಎಸ್.ಎಸ್.ಎಲ್.ಸಿ/ಪಿಯುಸಿಯಲ್ಲಿ ಸೇ 75 ಅಂಕವನ್ನು ಪಡೆದಿರಬೇಕು ಹಾಗು ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರು. ಮೀರಬಾರದು ಎಂದು ಆದೇಶ ಹೊರಡಿಸಿದೆ. ಈ ಆದೇಶ ಕೂಡಲೆ ರದ್ದು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಎಸ್.ಸಿ/ಎಸ್.ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ತಡೆ ಹಿಡಿದು, ಅವೈಜ್ಞಾನಿಕವಾದ ಮಾನದಂಡವನ್ನು ವಿಧಿಸಿದೆ. ಇದು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಮೋಸ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ.) ಕಿಡಿಕಾರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಶೇಖರ್ ಹಾವಂಜೆ, ಸರಕಾರವು ಎಸ್.ಸಿ/ಎಸ್.ಟಿ ಮಕ್ಕಳು ಎಸ್.ಎಸ್.ಎಲ್.ಸಿ/ಪಿಯುಸಿಯಲ್ಲಿ ಸೇ 75 ಅಂಕವನ್ನು ಪಡೆದಿರಬೇಕು ಹಾಗು ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರು. ಮೀರಬಾರದು ಎಂದು ಆದೇಶ ಹೊರಡಿಸಿದೆ. ಈ ಆದೇಶ ಕೂಡಲೆ ರದ್ದು ಮಾಡಬೇಕು. ಅಲ್ಲದೇ ವಿದೇಶದಲ್ಲಿ ಪಿ.ಎಚ್.ಡಿ ಹಾಗು ಉನ್ನತ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಕತ್ತರಿ ಹಾಕಿದೆ. ಈ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬಡ ಎಸ್.ಸಿ/ಎಸ್.ಟಿ ಸಮುದಾಯದ ವಿರೋಧಿ ಸರಕಾರ ಇದಾಗಿದ್ದು, ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ವರ್ಗಾವಣೆ ಮಾಡಿಕೊಂಡು ಅನ್ಯಾಯವೆಸಗಿದೆ. ಪ.ಜಾತಿ/ಪಂಗಡದವರನ್ನು ಸುಲಭವಾಗಿ ವಂಚಿಸಬಹುದು ಎಂದು ಈ ಸರ್ಕಾರಕ್ಕೆ ತಿಳಿದಿದೆ. ಸಿಎಂ ಸಿದ್ದರಾಮಯ್ಯನವರು ತಕ್ಷಣ ಸಮುದಾಯದ ಹಣವನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಎಸಗಿರುವ ಅನ್ಯಾಯಗಳ ವಿರುದ್ದ ಜು.25 ರಂದು ಬೆಂಗಳೂರಿನಲ್ಲಿ ರಾಜ್ಯ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಂಡು, ರಾಜ್ಯದ ಬೀದಿ ಬೀದಿಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು, ಕದಸಂಸ ಭೀಮವಾದ(ರಿ) ಜಿಲ್ಲಾ ಸಂಚಾಲಕ ಸಂಜೀವ್ ನಾಯ್ಕ್ ಕುಕ್ಕೆಹಳ್ಳಿ, ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಸಮಿತಿ ಸದಸ್ಯೆ ಸುಜಾತ.ಎಸ್.ಹಾವಂಜೆ ಇದ್ದರು.