ಶೀಘ್ರವೇ ಜಾತಿ ಗಣತಿ ವರದಿ ಅಂಗೀಕರಿಸಲು ದಸಂಸ ಒತ್ತಾಯ

| Published : Oct 23 2024, 01:47 AM IST / Updated: Oct 23 2024, 01:48 AM IST

ಶೀಘ್ರವೇ ಜಾತಿ ಗಣತಿ ವರದಿ ಅಂಗೀಕರಿಸಲು ದಸಂಸ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಾತಿ ಗಣತಿ ವರದಿ ಅಂಗೀಕರಿಸಬೇಕು ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಾತಿ ಗಣತಿ ವರದಿ ಅಂಗೀಕರಿಸಬೇಕು ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ದಸಂಸ ಮುಖಂಡರು ಮನವಿ ಸಲ್ಲಿಸಿ ಜಾತಿಗಣತಿ ವರದಿ ಶೀಘ್ರವೇ ಅನುಷ್ಟಾನಗೊಳಿಸಿ, ದಲಿತರಿಗೆ ಶೇ.50 ರಿಂದ ಶೇ.75ಕ್ಕೆ ಮೀಸಲಾತಿ ಹೆಚ್ಚಳಗೊಳಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ರಾಜ್ಯದ ಜನಸಂಖ್ಯೆಯ ಬಹು ಭಾಗವಾಗಿರುವ ಆದಿವಾಸಿ, ಅಲೆಮಾರಿ, ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ಸಮುದಾಯಗಳು ಹಲವು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ರೂಪಿಸಿಕೊಂಡು ಬಂದಿದೆ ಎಂದರು.ಜಾತಿ ಕೇಂದ್ರಿತ ರಾಜಕಾರಣದಿಂದಾಗಿ ಈ ಜನಾಂಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗಳನ್ನು ಉತ್ತಮಪಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ಇದರಿಂದ ಸಮಾಜದಲ್ಲಿ ಅಸಮಾನತೆ ಕಂದಕಗಳು ಮತ್ತಷ್ಟು ಹೆಚ್ಚಳಗೊಳ್ಳುತ್ತಿದೆ ಎಂದು ದೂರಿದರು.ಹೀಗಾಗಿ ಸಾಮಾಜಿಕ ನ್ಯಾಯದ ಗುರಿ ತಲುಪಲು ಕಾಲ ಕಾಲಕ್ಕೆ ಜಾತಿ ಗಣತಿಯ ನಿಖರ ವಿವರಗಳನ್ನು ಆಧರಿಸಿ ಮೀಸಲಾತಿ ಹೆಚ್ಚಳ ಹಾಗೂ ಇನ್ನಿತರ ಯೋಜನೆ ರೂಪಿಸುವುದು ಅನಿವಾರ್ಯ. ಆ ನಿಟ್ಟಿನಲ್ಲಿ ಸರ್ಕಾರ ಮುಂದಾಗುತ್ತಿರುವುದು ಅಭಿನಂದನಾರ್ಹ ಎಂದರು.ಜಾತಿ ಗಣತಿ ವರದಿ ಸ್ವೀಕಾರಗೊಂಡ ಕೂಡಲೇ ಕೆಲವು ಪಟ್ಟಭದ್ರ ಜಾತಿವಾದಿ ವ್ಯಕ್ತಿ ಹಾಗೂ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಅಸಮಾಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ. ಪಟ್ಟಭದ್ರ ಜಾತಿವಾದಿ ಜಾತಿಗಣತಿ ವರದಿ ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ದಸಂಸ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.ಜಾತಿಗಣತಿ ವರದಿ ಅಂಕಿ-ಅಂಶಗಳ ಪ್ರಕಾರ ಪ.ಜಾತಿ, ಪ.ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಪ್ರಸ್ತುತ ಶೇ.50 ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಸಾಮಾಜಿಕ ನ್ಯಾಯದ ಪರಂಪರೆಯನ್ನು ಸರ್ಕಾರ ಎತ್ತಿ ಹಿಡಿದು ದೇಶಕ್ಕೆ ಮಾದರಿ ಆಡಳಿತ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಚಿದಾನಂದ್, ಎಂ.ಎಸ್.ಪುಟ್ಟಸ್ವಾಮಿ, ಹರೀಶ್, ಈರೇಶ್, ವೆಂಕಟೇಶ್, ಮಲ್ಲೇಶ್, ಕಿರಣ್‌ಕುಮಾರ್ ಇದ್ದರು.22 ಕೆಸಿಕೆಎಂ 2ಜಾತಿ ಗಣತಿ ವರದಿ ಅಂಗೀಕರಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.