ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೃದಯ ಭಾಗದಲ್ಲಿ ಅಪೂರ್ಣಗೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದ ದಸಂಸ ಕಾರ್ಯಕರ್ತರನ್ನು ಪೊಲೀಸರು ಅರ್ಧದಲ್ಲಿಯೇ ತಡೆದು ಬಂಧಿಸಿದರು.ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿ 13 ವರ್ಷಗಳೇ ಕಳೆದರು ಅಪೂರ್ಣಗೊಂಡು ಅರ್ಧಕ್ಕೆ ನಿಂತಿದೆ. ಕಾಮಗಾರಿ ಆರಂಭಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಸಂಸ ಮುಖಂಡರು ಸಚಿವ ಮಹದೇವಪ್ಪ ಅವರ ನಿವಾಸ ಮುತ್ತಿಗೆ ಹಾಕಲು ಯತ್ನಿಸಿದರು.
ದಸಂಸ ಮುಖಂಡರು ಸಚಿವ ಮಹದೇವಪ್ಪ ಅವರ ಮನೆಗೆ ಮುತ್ತಿಗೆ ಹಾಕುವ ವಿಷಯ ತಿಳಿದ ಪೊಲೀಸರು ಅವರ ಮನಗೆ ಆಗಮಿಸುವ ರಸ್ತೆಗಳಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರನ್ನು ತಡೆದು ಬಂಧಿಸಿದರು. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸ್ ವ್ಯಾನ್ ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.ಪೊಲೀಸರ ವರ್ತನೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಪೊಲೀಸರು, ಸಚಿವ ಮಹದೇವಪ್ಪ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿ ಆರಂಭವಾಗಿ 13 ವರ್ಷ ಕಳೆದಿವೆ. ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಇತ್ತ ಗಮನ ಹರಿಸಲಿಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ದಲಿತ ಸಮುದಾಯ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಅಂಬೇಡ್ಕರ್ ಭವನ ಪೂರ್ಣಗೊಳಿಸುವಂತೆ ಒತ್ತಾಯಿಸಿಕೊಂಡು ಬರಲಾಗಿದೆ. ಆದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ಅದರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಾ ಬಂದಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಹಲವು ಬಾರಿ ತಂದರೂ ಇದರ ಬಗ್ಗೆ ಗಮನ ಹರಿಸದೆ ದಲಿತರನ್ನೆ ಕಡೆಗಣಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.ಮಾ. 27 ರಂದು ಕ್ಯಾಬಿನೆಟ್ ನಲ್ಲಿ ಅಂಭೇಡ್ಕರ್ ಭವನದ ಕಾಮಗಾರಿ ಆರಂಭ ಸಂಬಂಧ ಹೆಚ್ಚುವರಿ 23 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭಿಸದಿದ್ದರೆ ಏ. 14ರ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಅವಕಾಶ ನೀಡುವುದಿಲ. ಅವರ ದಲಿತ ವಿರೋಧಿ ನೀತಿಯನ್ನು ಕರಪತ್ರ ಮಾಡಿ ಎಲ್ಲಾ ಕಡೆಗಳಲ್ಲಿ ಹಂಚಲಾಗುವುದು ಎಂದರು.
ಡಿ. 6 ಅಂಬೇಡ್ಕರ್ ಪರಿನರ್ವಾಣ ದಿನದಂದೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದಂತೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಜಿಲ್ಲಾಧಿಕಾರಿಗಳು ಮಾತನಾಡಿ ಇನ್ನು ಒಂದು ತಿಂಗಳಲ್ಲಿ ಚಾಲನೆ ನೀಡುವ ಭರವಸೆ ನೀಡಿದ್ದರು. ಆದರೂ ಇದರ ಬಗ್ಗೆ ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಚಿವ ಮಹದೇವಪ್ಪ ಅವರ ಬಳಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಅವರು ಇದೂವರಗೂ ಅಂಬೇಡ್ಕರ್ ಭವನ ನಿರ್ಮಾಣದ ಕುರಿತು ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ನಾವು ಕೂಡ ತಾಳ್ಮೆಯಿಂದ ಇಷ್ಟು ದಿನ ಕಾದೆವು. ಆದರೆ ಸಚಿವರ ಉದ್ಧಟತನ ಮತ್ತು ದಲಿತರ ಮೇಲಿನ ತಾತ್ಸಾರ ಮನೋಭಾವದ ವಿರುದ್ಧ ಅವರ ಮನೆ ಮುತ್ತಿಗೆ ಹಾಕಲು ತೀರ್ಮಾನಿಸಿದೆವು ಎಂದರು.
ಸಚಿವ ಮಹದೇವಪ್ಪ ಅವರ ಮನೆ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶಂಭುಲಿಂಗಸ್ವಾಮಿ, ಶಿವಬುದ್ಧಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಕಲ್ಲಹಳ್ಳಿ ಕುಮಾರ್, ಆಲಗೂಡು ಶಿವಕುಮಾರ್, ಕುಕ್ಕೂರು ರಾಜು, ಸಿದ್ಧರಾಜು ಹೊಮ್ಮರಗಳ್ಳಿ, ಮುತ್ತು, ಮಹೇಶ್, ಅಶೋಕಪುರಂ ಅಣ್ಣಯ್ಯ, ಮೊದಲಾದವರು ಇದ್ದರು.