ಸಾರಾಂಶ
ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆ ಖಂಡಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿಯ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಗಳೂರು: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆ ಖಂಡಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿಯ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಹಿರಿಯ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ಸಂವಿಧಾನ ಕುರಿತ ಚರ್ಚೆ ನಡೆಯುವ ವೇಳೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಬಗ್ಗೆ ಜಪ ಮಾಡದೇ ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ಹೇಳುವ ಮೂಲಕ ಅವಹೇಳನ ಮಾಡಿದ್ದಾರೆ. ಈ ಹೇಳಿಕೆ ಉಗ್ರವಾಗಿ ಖಂಡಿಸುತ್ತೇವೆ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ರಕ್ತಪಾತವಾದರೂ ಸರಿ, ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕೀಲ ಆರ್. ಓಬಳೇಶ್ ಮಾತನಾಡಿ, ಅಮಿತ್ ಶಾ ಹೇಳಿಕೆ ಮನುವಾದ ಎತ್ತಿತೋರುತ್ತದೆ. ಅವರ ವಿರುದ್ಧ ಸೂಕ್ತ ಕಾಯಿದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಸಮಿತಿಯು ದೇಶದದ್ಯಾಂತ ಬೀದಿಗಿಳಿದು ಹೋರಾಟ ಮಾಡಲಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಶಾ ಅವರ ರಾಜೀನಾಮೆ ಪಡೆಯಬೇಕು ಎಂದರು.
ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಚಾಲಕ ಸೂರಗೊಂಡನಹಳ್ಳಿ ಕುಬೇಂದ್ರಪ್ಪ, ಮುಖಂಡರಾದ ಪಲ್ಲಾಗಟ್ಟೆ ರಂಗಪ್ಪ, ಬೆಣ್ಣೆಹಳ್ಳಿ ನಿಜಲಿಂಗಪ್ಪ, ಬಸವರಾಜ್, ಭರಮಸಮುದ್ರ ಕುಮಾರ್, ಮಹಾಂತೇಶ್, ಮಂಜಪ್ಪ, ರಾಜಪ್ಪ, ರೈತ ಮುಖಂಡ ಕುಮಾರ್ ಇತರರಿದ್ದರು.- - - -೨೦ಜೆಎಲ್‌ಆರ್‌ಚಿತ್ರ೧: