ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

| Published : Jul 25 2024, 01:17 AM IST

ಸಾರಾಂಶ

ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಆದಾಯ ಮಿತಿ ಕಡ್ಡಾಯಗೊಳಿಸದೇ ಪ್ರೋತ್ಸಾಹಧನವನ್ನು ಹಿಂದಿನಂತೆ ನೀಡಬೇಕು. ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾಯ್ದೆಗೆ ದುರುದ್ದೇಶದಿಂದ ಸೇರ್ಪಡೆ ಮಾಡಿರುವ ಸೆಕ್ಷನ್ 7ಸಿಯನ್ನು ರದ್ದುಗೊಳಿಸಿ, ಅನ್ಯ ಯೋಜನೆ ಮತ್ತು ವಿವಿಧ ಕಾಮಗಾರಿಗೆ ವಿನಿಯೋಗಿಸಿರುವ ಹಣವನ್ನು ದಲಿತರ ನಿಧಿಗೆ ವಾಪಸ್ ಜಮಾ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅನಗತ್ಯ ನಿಬಂಧನೆ ತೆಗೆದು, ಹಳೇ ನಿಯಮದಂತೆ ಸಂಶೋಧನಾ ವಿದ್ಯಾರ್ಥಿಗಳಿಗೂ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಗರದ ಪುರಭವನ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿದರು.

ಮೆಟ್ರಿಕ್ ನಂತರದ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಆದಾಯ ಮಿತಿ ಕಡ್ಡಾಯಗೊಳಿಸದೇ ಪ್ರೋತ್ಸಾಹಧನವನ್ನು ಹಿಂದಿನಂತೆ ನೀಡಬೇಕು. ಹೊರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಬ್ಯಾಕ್ಲಾಗ್ಹುದ್ದೆ ಭರ್ತಿ ಮಾಡಬೇಕು, ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಕಾಯ್ದೆಗೆ ದುರುದ್ದೇಶದಿಂದ ಸೇರ್ಪಡೆ ಮಾಡಿರುವ ಸೆಕ್ಷನ್ 7ಸಿಯನ್ನು ರದ್ದುಗೊಳಿಸಿ, ಅನ್ಯ ಯೋಜನೆ ಮತ್ತು ವಿವಿಧ ಕಾಮಗಾರಿಗೆ ವಿನಿಯೋಗಿಸಿರುವ ಹಣವನ್ನು ದಲಿತರ ನಿಧಿಗೆ ವಾಪಸ್ ಜಮಾ ಮಾಡಿ, ಈ ಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ಅವರು ಆಗ್ರಹಿಸಿದರು.

ವಾಲ್ಮೀಕಿ ನಿಗಮದ ಹೆಸರಿನಲ್ಲಿ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರದ ಖಜಾನೆಗೆ ಹಣ ಜಮೆ ಮಾಡಬೇಕು. ಇಡಬ್ಲ್ಯೂಎಸ್ ವರ್ಗಕ್ಕೆ ಆದಾಯ ಮಿತಿ 8 ಲಕ್ಷ ಇದ್ದು, ಶೋಷಿತರಿಗೆ 2.5 ಲಕ್ಷ ನಿಗದಿಪಡಿಸಿರುವುದನ್ನು 10 ಲಕ್ಷಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು. ಆರ್.ಟಿ.ಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ.ಜಾತಿ, ಪ.ಪಂಗಡ ಮಕ್ಕಳಿಗೆ 10ನೇ ತರಗತಿವರೆಗೆ ಸರ್ಕಾರವೇ ಶುಲ್ಕ ಪಾವಸಬೇಕು ಎಂದು ಅವರು ಆಗ್ರಹಿಸಿದರು.

ಕನಕಪುರ ತಾಲೂಕು ಮಾಳಗಾಳ ಗ್ರಾಮದ ದಲಿತ ಕೇರಿಗೆ ನುಗ್ಗಿ 7 ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ದಲಿತ ಯುವಕ ಅನೀತನ ಕೈ ಮೂಳೆ ಮುರಿದು ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು ಬಂಧಿಸುವಂತೆ ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಸಂಚಾಲಕ ಕೆ.ವಿ. ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ ಮೊದಲಾದವರು ಇದ್ದರು.