ರಾಜ್ಯದ 40 ಸಾವಿರ ಹೆಕ್ಟೇರ್ ಭೂಮಿ ಕೃಷಿ ನಾಶವಾಗಿದೆ. ₹40 ಸಾವಿರ ಕೋಟಿ ನಷ್ಟಕ್ಕೆ ತಕ್ಕಂತೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಗಳನ್ನಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಳೆ ಪರಿಹಾರ ನೀಡಬೇಕು. ರಾಜ್ಯದ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ರೈತ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಸರ್ಕಾರಗಳು ತುಂಬಿಕೊಡಬೇಕು. ಮಂಡ್ಯ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕದಲ್ಲಿ ಬರ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯ ಖಂಡಿಸಿ ಕರ್ನಾಟಕವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್‍ಯಕರ್ತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆ ಬೀಳದೆ ಬರ ಪರಿಸ್ಥಿತಿ ಎದುರಾಗಿ 4 ತಿಂಗಳಾದರೂ ಸಮರ್ಥವಾಗಿ ನಿರ್ವಹಿಸದೆ ರಾಷ್ಟ್ರೀಯ ದುರಂತವೆಂದು ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳದ ಸರ್ಕಾರದ ವೈಫಲ್ಯವನ್ನು ವಿರೋಧಿಸಿದರು.ಪ್ರತಿ ಎಕರೆಗೆ ಕೇವಲ ₹2500 ತಾತ್ಕಾಲಿಕವಾಗಿ ಪರಿಹಾರದ ಭಿಕ್ಷೆ ಘೋಷಿಸಿದ ಅನ್ಯಾಯಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಒಕ್ಕೂಟ ವ್ಯವಸ್ಥೆಯೊಳಗಿದ್ದರೂ ಕೇಂದ್ರ ಸರ್ಕಾರ ನೆರೆ ದೇಶದ ದುರಂತಕ್ಕೆಲ್ಲಾ ಸ್ಪಂದಿಸುತ್ತದೆ. ಆದರೆ, ಕರ್ನಾಟಕದ ಬರ ದುರಂತವನ್ನು ಗಂಭೀರವಾಗಿ ಪರಿಗಣಿಸದಿರುವುದನ್ನು ಖಂಡಿಸಿದರು.
ರಾಜ್ಯದಿಂದ ಆಯ್ಕೆಯಾದ ಸಂಸದರೂ ಕರ್ನಾಟಕದ ಬರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗದೆ ಮೂಗುದಾರ ಹಾಕಿದ ಎತ್ತುಗಳಂತಾಗಿದ್ದಾರೆ. ಕೂಡಲೇ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಈ ಕೂಡಲೇ ಘೋಷಿಸಬೇಕು. ಇದಕ್ಕೆ ತಕ್ಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯದ 40 ಸಾವಿರ ಹೆಕ್ಟೇರ್ ಭೂಮಿ ಕೃಷಿ ನಾಶವಾಗಿದೆ. ₹40 ಸಾವಿರ ಕೋಟಿ ನಷ್ಟಕ್ಕೆ ತಕ್ಕಂತೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಗಳನ್ನಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಳೆ ಪರಿಹಾರ ನೀಡಬೇಕು. ರಾಜ್ಯದ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ರೈತ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ಸರ್ಕಾರಗಳು ತುಂಬಿಕೊಡಬೇಕು. ಮಂಡ್ಯ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಬಿ. ಆನಂದ್, ಸುಶ್ಮಿತ, ಸುರೇಶ್‌ಕುಮಾರ್, ಮುತ್ತುರಾಜು, ಕುಮಾರ, ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.