ದಸರಾ ಜಂಬೂಸವಾರಿ ತಾಲೀಮು ಯಶಸ್ವಿ

| Published : Sep 30 2025, 12:00 AM IST

ಸಾರಾಂಶ

ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ದಸರಾ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾಗಿ ಲಕ್ಷ್ಮಿ ಮತ್ತು ಹೇಮಾವತಿ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ ಮೂರು ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ಜಂಬೂಸವಾರಿ ತಾಲೀಮು ಸೋನವಾರ ನಡೆಯಿತು.ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ದಸರಾ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾಗಿ ಲಕ್ಷ್ಮಿ ಮತ್ತು ಹೇಮಾವತಿ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿದ್ದವು.ಅಂಬಾರಿ ಹೊರಲಿರುವ ಅಭಿಮನ್ಯು ಆನೆಯು ವೇದಿಕೆ ಮುಂಭಾಗ ಬರುತ್ತಿದ್ದಂತೆ ಆನೆ ಯೋಜನೆಯ ಎಪಿಸಿಸಿಎಫ್ ಮನೋಜ್ ರಾಜನ್, ಮೈಸೂರು ವೃತ್ತ ಸಿಎಫ್ ಎಸ್. ರವಿಶಂಕರ್, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್, ಸಿದ್ದನಗೌಡ ಪಾಟೀಲ್ ಅವರು ಪುಷ್ಪಾರ್ಚನೆ ಮಾಡಿದರು.ಈ ವೇಳೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಅರಮನೆಯ ಹೊರ ಆವರಣದಲ್ಲಿ 7 ಪಿರಂಗಿಗಳನ್ನು ಬಳಸಿ ಒಟ್ಟು 21 ಕುಶಾಲತೋಪುಗಳನ್ನು ಪಿರಂಗಿ ದಳದ ಸಿಬ್ಬಂದಿ ಸಿಡಿಸಿದರು.ಈ ತಾಲೀಮಿನಲ್ಲಿ ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದವು. ಉಳಿದವು ಸಾಲಾನೆಗಳಾಗಿ ಸಾಗಿದವು. ಅರಮನೆ ಖಾಸಗಿ ದರ್ಬಾರ್ ನಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಂಡಿದ್ದ ಶ್ರೀಕಂಠ ಮತ್ತು ಏಕಲವ್ಯ ಆನೆಯು ಈ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.-----ಕೋಟ್...ಜಂಬೂಸವಾರಿಗೆ ಎಲ್ಲಾ ಆನೆಗಳು ಸಿದ್ದಗೊಂಡಿವೆ. ವಿವಿಧ ಹಂತದ ತಾಲೀಮಿನ ಬಳಿಕ ಇದೀಗ ಅಂತಿಮ ಸುತ್ತಿನಲ್ಲಿ ಮೆರವಣಿಗೆಯ ರಿಹರ್ಸಲ್ ನಡೆಸಲಾಗಿದೆ. ಮೆರವಣಿಗೆ ದಿನ ಆನೆಗಳು ಯಾವ ರೀತಿ ಸಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ಪೂರ್ವ ತಾಲೀಮು ನಡೆಸಲಾಗಿದೆ. ಈ ಮೂಲಕ ಜಂಬೂಸವಾರಿ ಮೆರವಣಿಗೆಗೆ ಆನೆಗಳನ್ನು ತಯಾರಿ ಮಾಡಲಾಗುತ್ತಿದೆ.- ಮನೋಜ್ ರಾಜನ್, ಎಪಿಸಿಸಿಎಫ್, ಆನೆ ಯೋಜನೆ