ಆಯುಧ ಪೂಜೆ, ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಗಳಿಗೆ ಆಗಮಿಸಿದ ಜನರು ಹೂವು, ಹಣ್ಣು, ಬಾಳೆದಿಂಡು, ಬೂದುಕುಂಬಳಕಾಯಿ ಖರೀದಿ ಭರ್ಜರಿಯಾಗಿ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಯುಧ ಪೂಜೆ, ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಗಳಿಗೆ ಆಗಮಿಸಿದ ಜನರು ಹೂವು, ಹಣ್ಣು, ಬಾಳೆದಿಂಡು, ಬೂದುಕುಂಬಳಕಾಯಿ ಖರೀದಿ ಭರ್ಜರಿಯಾಗಿ ಮಾಡಿದರು.ನಗರದ ಪ್ರಮುಖ ಹೂವು, ಹಣ್ಣುಗಳ ಮಾರುಕಟ್ಟೆಯಾಗಿರುವ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಗಾಂಧಿಬಜಾರ್, ಜಯನಗರ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಭಾನುವಾರ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ವಾಹನಗಳ ಪೂಜೆ ಸೇರಿದಂತೆ ಆಯುಧ ಪೂಜೆಗೆ ಪ್ರಮುಖವಾಗಿ ಬಳಸುವ ಒಂದು ಜೊತೆ ಬಾಳೆ ದಿಂಡು ಬೆಲೆ ನಗರದ ಬೇರೆ ಬೇರೆ ಭಾಗಗಳಲ್ಲಿ 120 ರು.ವರೆಗೂ ಇತ್ತು. ತಳಿರು ತೋರಣಗಳ ಮಾವಿನ ಎಲೆಗಳು ಕೂಡ ಒಂದು ಕಟ್ಟಿಗೆ 30 ರು.ನಿಂದ 50 ರು.ವರೆಗೆ ಮಾರಾಟವಾಗುತ್ತಿದೆ. ಬೂದುಕುಂಬಳಕಾಯಿ ದರವೂ ಗಾತ್ರದ ಆಧಾರದ ಮೇಲೆ ಒಂದಕ್ಕೆ 100 ರು.ನಿಂದ 150 ರು.ವರೆಗೂ ಮಾರಾಟವಾಗಿದೆ.ಹೂವುಗಳ ದರ ಏರಿಕೆ:
ಸೇವಂತಿ ಪ್ರತಿ ಕೆ.ಜಿಗೆ ಈ ಮೊದಲು ಗರಿಷ್ಠ 80 ರು. ಸಿಗುತ್ತಿತ್ತು. ಈಗ 400 ರು.ವರೆಗೂ ಏರಿಕೆಯಾಗಿದೆ. ಬಿಡಿ ಗುಲಾಬಿ 80 ರು.ಯಿಂದ 250 ರು. ಆಗಿದೆ. ಕನಕಾಂಬರ 1,000 ರು. ಇದ್ದದ್ದು ಈಗ 4000 ರು.ವರೆಗೂ ಗೆ ಏರಿಕೆಯಾಗಿದೆ. ಮಲ್ಲಿಗೆ ಹೂವು 700 ರು.ನಿಂದ 1,000 ರು. ಇದ್ದದ್ದು, 1,800 ರು.ನಿಂದ 2,000 ರು.ಗೆ ಏರಿಕೆಯಾಗಿದೆ. ಗುಲಾಬಿ ಹೂವು ಕೆ.ಜಿಗೆ 500 ರು.ವರೆಗೆ ಏರಿಕೆಯಾಗಿದೆ.ಹಣ್ಣುಗಳ ದರ ಏರಿಕೆ: ಬಹುತೇಕ ಹಣ್ಣುಗಳ ದರ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ ಸೇಬು 220 ರು.ಯಿಂದ 355 ರು.ಗೆ ಮಾರಾಟವಾಗುತ್ತಿದೆ. ಬಟರ್ ಫ್ರೂಟ್ 250 ರು., ದಾಳಿಂಬೆ 250 ರು., ಸಪೋಟಾ 85 ರು., ಮೊಸಂಬಿ 83 ರು., ಏಲಕ್ಕಿ ಬಾಳೆಹಣ್ಣು 120 ರು.ತಲುಪಿದೆ.
ಮಳೆ ಕೊರತೆ ಪರಿಣಾಮ: ಈ ವರ್ಷ ಮಳೆಗಾಲದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಫಸಲು ಬಹಳಷ್ಟು ಕಡಿಮೆಯಾಗಿದೆ. ಹೀಗಾಗಿ, ಹೂವು, ಹಣ್ಣುಗಳ ಬೆಲೆ ಕಳೆದ ವರ್ಷದ ಹಬ್ಬಕ್ಕೆ ಹೋಲಿಸಿದರೆ ಈ ವರ್ಷ ಬಹಳಷ್ಟು ಏರಿಕೆಯಾಗಿದೆ. ಪ್ರತಿ ವರ್ಷವೂ ಶೇ.5ರಿಂದ 10ರಷ್ಟು ಏರಿಕೆಯಾಗುವುದು ಸಹಜ. ಆದರೆ, ಈ ವರ್ಷ ಶೇ.50ರವರೆಗೂ ಏರಿಕೆಯಾಗಿದೆ. ಗ್ರಾಹಕರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೆ.ಆರ್. ಮಾರುಕಟ್ಟೆ ವ್ಯಾಪಾರಿಗಳು ಹೇಳಿದ್ದಾರೆ.ನಗರದ ಮಾರುಕಟ್ಟೆಗಳಿಗೆ ಎಂದಿನಂತೆ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮಾತ್ರವಲ್ಲದೇ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಹೂವು, ಹಣ್ಣುಗಳು ಹರಿದು ಬಂದಿವೆ.
ಬೆಲೆ ಎಷ್ಟೇ ಏರಿಕೆಯಾದರೂ ವರ್ಷಕ್ಕೆ ಒಮ್ಮೆ ಬರುವ ಪ್ರಮುಖ ಹಬ್ಬದ ವೇಳೆ ಆಯುಧ ಪೂಜೆಗೆ ಹೂವು, ಹಣ್ಣುಗಳನ್ನು ಖರೀದಿಸಲೇಬೇಕು. ಹೀಗಾಗಿ, ಅಗತ್ಯವಿರುವಷ್ಟು ಖರೀದಿಸುತ್ತಿದ್ದೇವೆ. ಹಬ್ಬದ ನಂತರ ಮತ್ತೆ ದರ ಇಳಿಕೆಯಾಗಬಹುದು ಎಂದು ಕೆ.ಆರ್. ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು ಹೇಳಿದರು.