ಕರ್ನಾಟಕದಲ್ಲಿ ಪ್ರಥಮವಾಗಿ ದಸರಾ ಮಹೋತ್ಸವ ಪ್ರಾರಂಭವಾಗಿದ್ದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಹೇಮಗುಡ್ಡ ಗ್ರಾಮದಲ್ಲಿರುವ 700 ವರ್ಷ ಪ್ರಾಚೀನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ.
ಎಸ್. ನಾರಾಯಣ್ಮುನಿರಾಬಾದ್: ಕರ್ನಾಟಕದಲ್ಲಿ ಪ್ರಥಮವಾಗಿ ದಸರಾ ಮಹೋತ್ಸವ ಪ್ರಾರಂಭವಾಗಿದ್ದು, ಇಲ್ಲಿಗೆ ಸಮೀಪದ ಹೇಮಗುಡ್ಡ ಗ್ರಾಮದಲ್ಲಿರುವ 700 ವರ್ಷ ಪ್ರಾಚೀನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ. ಈ ಕುರಿತಂತೆ ಇತಿಹಾಸಕಾರ ಶರಣಪ್ಪ ಕೋಲ್ಕಾರ ಅವರು ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ.
ದಸರಾ ಮಹೋತ್ಸವ ಮೊದಲು ಮಹಾರಾಷ್ಟ್ರದ ದೇವಗಿರಿ ಎಂಬಲ್ಲಿ ಆಚರಿಸಲ್ಪಡುತ್ತಿತ್ತು. ಅಲ್ಲಿ ಇಮ್ಮಡಿ ಸಿಂಹರಾಯ ಎಂಬವರು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ದೇವಗಿರಿ ಸಂಸ್ಥಾನದ ಪತನದ ನಂತರ ಇಮ್ಮಡಿ ಸಿಂಹರಾಯರು ಈ ಭವ್ಯ ಪರಂಪರೆಯನ್ನು ಕರ್ನಾಟಕದ ಕಮ್ಮಟದುರ್ಗಗೆ ತಂದು, ಅಲ್ಲಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರಾರಂಭಿಸಿದರು. ಇಮ್ಮಡಿ ಸಿಂಹರಾಯರ ನಂತರ ಅವರ ಮಕ್ಕಳಾದ ಕಂಪಿಲರಾಯ ಹಾಗೂ ಗಂಡುಗಲಿ ಕುಮಾರರಾಮ ಈ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು.ಕಮ್ಮಟದುರ್ಗವನ್ನು 1290ರಿಂದ 1330ರ ವರೆಗೆ ಆಳಿದ ಅಂದಿನ ಪಾಳೆಗಾರ ಗಂಡುಗಲಿ ಕುಮಾರರಾಮ ಕಮಟ್ಟದುರ್ಗದ ಸುತ್ತಮುತ್ತಲಿನ ಪಾಳೆಗಾರರನ್ನು ಅವರ ಸೈನ್ಯದ ಸಮೇತ ಕರೆಸಿ, ದಸರಾ ಮಹೋತ್ಸವವನ್ನು 9 ದಿನ ವಿಜೃಂಭಣೆಯಿಂದ ಆಚರಿಸುತ್ತಿದ್ದನು. ಗಂಡುಗಲಿ ಕುಮಾರರಾಮ ಅಸುನೀಗಿದ ನಂತರ, ಅವನ ಅಕ್ಕನ ಮಕ್ಕಳಾದ ಹಕ್ಕ ಮತ್ತು ಬುಕ್ಕರು ಈ ಪರಂಪರೆಯನ್ನು ಹಂಪಿಯ ವಿಜಯನಗರದ ಸಾಮ್ರಾಜ್ಯದಲ್ಲಿ 1330ರಿಂದ ಪ್ರಾರಂಭಿಸಿದರು. ಕಮ್ಮಟದುರ್ಗದ ಅರಸರಿಂದ ದಸರಾ ಮಹೋತ್ಸವದ ಆಚರಣೆಯಲ್ಲಿ ಬಳಸಲ್ಪಡುತ್ತಿದ್ದ ಬಂಗಾರದ ಅಂಬಾರಿ ಹಾಗೂ ಸಿಂಹಾಸನವನ್ನು ವಿಜಯನಗರ ಅರಸರಿಗೆ ಹಸ್ತಾಂತರಿಸಲಾಯಿತು. 1330ರಿಂದ 1610ರ ವರೆಗೆ ಸುಮಾರು 3 ಶತಮಾನಗಳ ಕಾಲ ವಿಜಯನಗರ ಸಾಮ್ರಾಜ್ಯದ ಅರಸರು ಈ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದರು ಮತ್ತು ಅದನ್ನು ಉತ್ತುಂಗಕ್ಕೆ ಕೊಂಡೊಯ್ದರು. ಹಂಪಿಯಲ್ಲಿರುವ ಮಹಾನವಮಿ ದಿಬ್ಬವೇ ಇದಕ್ಕೆ ಸಾಕ್ಷಿ ಎಂದು ಶರಣಪ್ಪ ಕೋಲ್ಕಾರ ಮಾಹಿತಿ ನೀಡಿದ್ದಾರೆ.1610ರಲ್ಲಿ ವಿಜಯನಗರ ಸಾಮ್ರಾಜ್ಯ ಪತನದ ಅಂಚಿಗೆ ಬಂದಾಗ, ವಿಜಯನಗರ ಸಾಮ್ರಾಜ್ಯದ ಅರಸ ವೀರ ವೆಂಕಟಪತಿ ರಾಜು ಮೈಸೂರು ಸಾಮ್ರಾಜ್ಯದ ಅರಸರನ್ನು ಕರೆಸಿ, ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯಾದ ದಸರಾ ಮಹೋತ್ಸವ ಮುಂದುವರಿಸಿಕೊಂಡು ಹೋಗಲು ಸಲಹೆ ನೀಡಿದರು. ಅಂದಿನ ಮೈಸೂರು ಅರಸರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಆಗ ವೀರ ವೆಂಕಟಪತಿ ರಾಜು ದಸರಾ ಹಬ್ಬದಲ್ಲಿ ಅರಸರು ಕೂಡುತ್ತಿದ್ದ ಚಿನ್ನದ ಸಿಂಹಾಸನ ಹಾಗೂ ಆನೆಯ ಮೇಲೆ ಮೆರವಣಿಗೆ ಮಾಡಲು ಬಳಸುತ್ತಿದ್ದ ಚಿನ್ನದ ಅಂಬಾರಿಯನ್ನು ಮೈಸೂರು ಅರಸರಿಗೆ ಹಸ್ತಾಂತರಿಸಿದರು.1610ರಿಂದ ಇಂದಿನ ವರೆಗೆ ಅಂದರೆ ಕಳೆದ 4 ಶತಮಾನಗಳಿಂದ ಮೈಸೂರು ಅರಸರು ದಸರಾ ಉತ್ಸವವನ್ನು ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿದ್ದಾರೆ.ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ 45 ವರ್ಷಗಳಿಂದ ಮಾಜಿ ಸಂಸದ ಎಚ್.ಜಿ. ರಾಮುಲು ಹಾಗೂ ಅವರ ಪುತ್ರ ಎಚ್.ಜಿ. ಶ್ರೀನಾಥ ಅವರು ದಸರಾ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಹೇಮಗುಡ್ಡದ ಗ್ರಾಮಸ್ಥರು ಅವರಿಗೆ ಕೈ ಜೋಡಿಸುತ್ತಿದ್ದಾರೆ.ಸಂತಸದ ವಿಷಯ: ಕನ್ನಡನಾಡಿನಲ್ಲಿ ಪ್ರಥಮವಾಗಿ ದಸರಾ ಉತ್ಸವ ಪ್ರಾರಂಭವಾಗಿದ್ದು ಕೊಪ್ಪಳ ಜಿಲ್ಲೆಯಲ್ಲಿ. ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮೈಸೂರು ದಸರಾ ಮಹೋತ್ಸವ ಉದ್ಘಾಟಿಸುತ್ತಿರುವುದು ಸಂತಸದ ವಿಷಯ ಎಂದು ಇತಿಹಾಸ ತಜ್ಞ ಶರಣಪ್ಪ ಕೋಲ್ಕಾರ ಹೇಳಿದರು.