ದಾಸಶ್ರೇಷ್ಠ ಕನಕದಾಸರ ಮೂರ್ತಿ ಅದ್ಧೂರಿ ಮೆರವಣಿಗೆ

| Published : Nov 19 2024, 12:47 AM IST

ಸಾರಾಂಶ

ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಗೊರವರ ಕುಣಿತ, ಪಟ ಕುಣಿತ, ಕೊಡಗಿನ ನೃತ್ಯ, ಬೀಸು ಕಂಸಾಳೆ, ಜೇನುಕುರುಬರ ನೃತ್ಯ, ನಗಾರಿ ಸೇರಿದಂತೆ 20 ಹೆಚ್ಚು ಜಾನಪದ ಕಲಾತಂಡಗಳ ಕಲಾವಿದರು ತಮ್ಮ ನೃತ್ಯ ಪ್ರದರ್ಶನ ಮೂಲಕ ಆಕರ್ಷಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಾಸಶ್ರೇಷ್ಠ ಸಂತಕವಿ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಸೋಮವಾರ ವಿವಿಧ ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಕನಕದಾಸರ ಮೂರ್ತಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ. ಹರೀಶ್ ಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಅಲಂಕೃತ ಬೆಳ್ಳಿ ರಥದಲ್ಲಿ ಇರಿಸಲಾಗಿದ್ದ ಕನಕದಾಸರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.

ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಗೊರವರ ಕುಣಿತ, ಪಟ ಕುಣಿತ, ಕೊಡಗಿನ ನೃತ್ಯ, ಬೀಸು ಕಂಸಾಳೆ, ಜೇನುಕುರುಬರ ನೃತ್ಯ, ನಗಾರಿ ಸೇರಿದಂತೆ 20 ಹೆಚ್ಚು ಜಾನಪದ ಕಲಾತಂಡಗಳ ಕಲಾವಿದರು ತಮ್ಮ ನೃತ್ಯ ಪ್ರದರ್ಶನ ಮೂಲಕ ಆಕರ್ಷಿಸಿದರು.

ಅಲ್ಲದೆ, ಕನಕದಾಸರ ಸ್ತಬ್ಧಚಿತ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಯುವನಿಧಿ, ಗೃಹ ಜ್ಯೋತಿ ಬಿಂಬಿಸುವ 5 ಗ್ಯಾರಂಟಿ ಯೋಜನೆಗಳ ಸ್ತಬ್ಧಚಿತ್ರವು ಗಮನ ಸೆಳೆಯಿತು. ಅಲ್ಲದೆ, ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಸ್ಕೂಟರ್ ಖರೀದಿ ಮಾಡಿದ ಮಾದರಿ ಎಲ್ಲರ ಗಮನ ಸೆಳೆಯಿತು.

ಕನಕದಾಸರ ಜಯಂತಿ ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್ ಪಾಲ್ಗೊಂಡು ವಾದ್ಯ ನುಡಿಸಿದರು. ಶ್ರೀ ಮಲೈ ಮಹದೇಶ್ವರ ದೇವಸ್ಥಾನದ ನಿರ್ಮಾತೃ ಹಾಲುಮತದ ಶ್ರೀ ಜುಂಜೇಗೌಡರ, ಭರತ ಖಂಡವನ್ನು ಕಟ್ಟಿ ಒಗ್ಗೂಡಿಸಿದ ಮೊದಲ ಮೌರ್ಯ ಸಾಮ್ರಾಟ ಚಂದ್ರಗುಪ್ತ ಮೌರ್ಯ, ವಿಜಯನಗರ ಸಾಮ್ರಾಜ್ಯದ ಹಕ್ಕಬುಕ್ಕರ ಸಾಧನೆ ಬಿಂಬಿಸುವ, ರಾಜ್ಯ ಸರ್ಕಾರದ ಸಾಧನೆ ಬಿಂಬಿಸುವ ಸ್ತಬ್ಧಚಿತ್ರಗಳು ಸಾರ್ವಜನಿಕರ ಗಮನ ಸೆಳೆದವು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ ಮೆರವಣಿಗೆಯು ಚಾಮರಾಜ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಜೆಎಲ್ ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಕಲಾಮಂದಿರ ಆವರಣಕ್ಕೆ ತಲುಪಿತು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಎಂ. ಮುತ್ತುರಾಜು, ಮುಖಂಡರಾದ ಸುಬ್ರಹ್ಮಣ್ಯ, ಎಂ. ಶಿವಣ್ಣ, ಬೀರಿಹುಂಡಿ ಬಸವಣ್ಣ, ಜೆ. ಗೋಪಿ, ಕೆ.ಎಸ್. ಶಿವರಾಮು, ವೆಂಕಟೇಶ್, ವಿಶ್ವನಾಥ್ ಮೊದಲಾದವರು ಇದ್ದರು.