ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಾಡಹಬ್ಬ ದಸರಾ, ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಗುರುವಾರ ಅತ್ಯಂತ ವೈಭವದಿಂದ ಶೋಭಾಯಾತ್ರೆ ನಡೆಯಿತು.ನಗರದ ಬೇತೂರು ರಸ್ತೆಯಲ್ಲಿನ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಶೋಭಾಯಾತ್ರೆಗೆ ಇಲ್ಲಿನ ವಿನೋಬ ನಗರದ ಜಡೆ ಸಿದ್ದೇಶ್ವರ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಶ್ರೀ ದುರ್ಗಾಮಾತೆಗೆ ಪುಷ್ಪಾರ್ಚನೆ ಮಾಡುವ ಚಾಲನೆ ನೀಡಿದರು.
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ದೊರೆತಿರಲಿಲ್ಲ. ಶೋಭಾಯಾತ್ರೆಯಲ್ಲಿ ಡಿಜೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಯುವಕರ ಆರ್ಭಟ ನೂರ್ಮಡಿಯಾಗಿತ್ತು. ಡಿಜೆಯಿಂದ ಹೊರ ಬರುತ್ತಿದ್ದಂತಹ ಮನಸೋ ಇಚ್ಛೆ ಹೆಜ್ಜೆ ಹಾಕಿದರು. ಜನಪ್ರತಿನಿಧಿಗಳು, ಗಣ್ಯರು, ಪ್ರಮುಖರು, ಚಿಕ್ಕ ಮಕ್ಕಳಾದಿಯಾಗಿ ಭರ್ಜರಿಯಾಗಿ ನರ್ತಿಸಿ ಮೆರುಗು ಹೆಚ್ಚಿಸಿದರು.ದಸರಾ ಶೋಭಾಯಾತ್ರೆ ಸಾಗಿ ಬಂದ ಎಲ್ಲೆಡೆ ರಸ್ತೆ ಪಕ್ಕ, ಕಟ್ಟಡಗಳ ಮೇಲೆ ಸಾವಿರಾರು ಜನರು ಹೂವಿನ ಮಳೆ ಸುರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಶೋಭಾಯಾತ್ರೆ ಕೇಸರಿಮಯವಾಗಿತ್ತು. ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ, ಶಿವಾಜಿ ಮಹಾರಾಜರಿಗೆ ಜೈ... ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಮೈಸೂರಿನಲ್ಲಿ ನಾಡಹಬ್ಬ ದಸರಾ ಮೆರವಣಿಗೆ ನೆನೆಪಿಸುವಂತೆ ಜಾನಪದ ಕಲಾತಂಡಗಳು ಕಂಡು ಬಂದವು. ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಸಮಾಳ, ನಂದಿಕೋಲು, ಬೊಂಬೆ ಕುಣಿತ, ನಾಸಿಕ್ ಡೋಲು, ಬ್ಯಾಂಡ್ ವಾದ್ಯಗೋಷ್ಠಿ ಕಂಗೊಳಿಸಿದವು.
ಭಾರತ ಮಾತೆ, ಹೆಡಗೇವಾರ್, ಗೋಲವಾಲ್ಕರ್, ಅಂಬೇಡ್ಕರ್, ಬಸವೇಶ್ವರ, ಅಕ್ಕಮಹಾದೇವಿ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಮದಕರಿ ನಾಯಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ನಾಡ ದೇವತೆ ಶ್ರೀಚಾಮುಂಡೇಶ್ವರಿ, ಶ್ರೀದುರ್ಗಾಂಬಿಕಾದೇವಿ, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ, ಬಾಲ ಗಂಗಾಧರ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಇತರರ ಭಾವಚಿತ್ರ, ಸ್ತಬ್ಧ ಚಿತ್ರಗಳು, ಚಿಕ್ಕ ಮಕ್ಕಳ ನವದುರ್ಗೆಯರ ರೂಪಕ ಶೋಭಾಯಾತ್ರೆಯ ಸೊಬಗು ಹೆಚ್ಚಿಸಿದವು.ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಮೇಯರ್‌ಗಳಾದ ಬಿ.ಜಿ.ಅಜಯ್ ಕುಮಾರ್, ಎಸ್.ಟಿ.ವೀರೇಶ್, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಪಾಲಿಕೆ ಮಾಜಿ ಸದಸ್ಯರಾದ ಆರ್.ಶಿವಾನಂದ್, ಕೆ.ಎಂ.ವೀರೇಶ್, ಆರ್.ಎಲ್.ಶಿವಪ್ರಕಾಶ್, ಶಿವನಗೌಡ ಟಿ.ಪಾಟೀಲ್, ಲೋಕಿಕೆರೆ ನಾಗರಾಜ್, ಸಾರ್ವಜನಿಕ ವಿಜಯ ದಶಮಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ್, ವಿನಾಯಕ ರಾನಡೆ, ತಿಪ್ಪೇಸ್ವಾಮಿ, ಶಂಭುಲಿAಗಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಟಿಂಕರ್ ಮಂಜಣ್ಣ, ಕಲ್ಲಪ್ಪ, ಗಂಗಾಧರ್, ಕೆ.ಬಿ.ಶಂಕರ ನಾರಾಯಣ್, ಚಂದ್ರಶೇಖರ್ ಪೂಜಾರ. ಜಿ.ಎಸ್.ಅನಿತ್ ಕುಮಾರ್, ಎನ್.ರುದ್ರಮುನಿ, ಚೇತನಾ ಶಿವಕುಮಾರ್, ಭಾಗ್ಯ ಪಿಸಾಳೆ, ಮಂಜುಳಾ ಮಹೇಶ್, ಸಾವಿತ್ರ ರವಿಕುಮಾರ್, ಎಚ್.ಸಿ.ಜಯಮ್ಮ, ರೇಖಾ ಕೃಷ್ಣ ಇತರರು ಇದ್ದರು.
ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆ ಬಂಬೂಬಜಾರ್, ಚೌಕಿಪೇಟೆ, ಹಗೇದಿಬ್ಬ ವೃತ್ತ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಹೊಂಡದ ವೃತ್ತ, ಬಾರ್‌ಲೈನ್ ರಸ್ತೆ, ರೇಣುಕ ಮಂದಿರ ರಸ್ತೆ, ಹಳೆ ಪಿಬಿ ರಸ್ತೆ ಮೂಲಕ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮುಕ್ತಾಯಗೊಂಡಿತು. ಅಂಬು ಛೇದನದೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಳಿಸಲಾಯಿತು. ಗಡೀಪಾರು ಆಗಿರುವ ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿ ಅವರ ಭಾವಚಿತ್ರದೊಂದಿಗೆ ಅನೇಕ ಯುವಕರು ಹೆಜ್ಜೆ ಹಾಕಿದರು.ಕ್ಯಾಪ್ಷನ2ಕೆಡಿವಿಜಿ44: ದಾವಣಗೆರೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಶಾಸಕ ಬಿ.ಪಿ.ಹರೀಶ್, ಜಿ.ಎಸ್.ಅನಿತ್‌ಕುಮಾರ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ಇತರರು ಇದ್ದರು.