ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ಗಣಿನಾಡು ಸಂಡೂರು ತಾಲೂಕಿಗೆ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಇತ್ತೀಚೆಗೆ ಅಡಿಕೆ, ಏಲಕ್ಕಿ, ಕಾಫಿ, ಅಂಜೂರ, ಸೇಬು ಮುಂತಾದ ವಾಣಿಜ್ಯ ಬೆಳೆಗಳು ಕಾಲಿಟ್ಟು ವರ್ಷದಿಂದ ವರ್ಷಕ್ಕೆ ತಮ್ಮ ವಿಸ್ತೀರ್ಣ ಹೆಚ್ಚಿಸಿಕೊಳ್ಳುತ್ತಿವೆ. ಅವುಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಕರ್ಜೂರ ಬೆಳೆ.ತಾಲೂಕಿನ ಜಿಗೇನಹಳ್ಳಿಯ ಪ್ರಗತಿಪರ ರೈತರು ಹಾಗೂ ಸದಾ ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕುವ ಜೆ. ರಾಜಶೇಖರ ಪಾಟೀಲ್ ತಮ್ಮ ಐದೂವರೆ ಎಕರೆ ಜಮೀನಿನಲ್ಲಿ ಮಹಾಗನಿ, ಸೇಬು, ಮಾವು, ಚೆರ‍್ರಿ, ಚೆಂಡು ಹೂವಿನ ಕೃಷಿಯ ಜೊತೆಗೆ ೮೦ ಕರ್ಜೂರದ ಗಿಡಗಳನ್ನು ಬೆಳೆದಿದ್ದಾರೆ. ನಾಟಿ ಮಾಡಿ ಮೂರನೇ ವರ್ಷಕ್ಕೆ ಕರ್ಜೂರದ ಕೆಲ ಗಿಡಗಳು ಫಲ ನೀಡಿ, ಬೆಳೆಸಿದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿವೆ. ಅಲ್ಲದೆ, ಈ ಭಾಗದಲ್ಲಿನ ವಾತಾವರಣದಲ್ಲಿ ನಾವು ಚೆನ್ನಾಗಿ ಬೆಳೆಯುತ್ತೇವೆ ಎಂಬುದನ್ನು ಜನತೆಗೆ ಸಾರಿ ಹೇಳಿವೆ.
ತಮ್ಮ ಖರ್ಜೂರ ಕೃಷಿ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಜೆ.ರಾಜಶೇಖರ ಪಾಟೀಲ್, ಕೃಷಿ ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆದರೆ ಅನುಕೂಲವಾಗುತ್ತದೆ ಎಂದು ಎರಡು ಎಕರೆಯಲ್ಲಿ ಮಹಾಗನಿ ಗಿಡಗಳನ್ನು ಬೆಳೆದೆ. ಅವು ಚೆನ್ನಾಗಿ ಬಂದಿವೆ. ಇನ್ನುಳಿದ ಎರಡೂವರೆ ಎಕರೆಯಲ್ಲಿ ೩೦೦ ಸೇಬು ಗಿಡಗಳನ್ನು ಹಾಕಿದ್ದೇನೆ. ಅವುಗಳಲ್ಲಿ ೨೦೦-೨೫೦ ಉಳಿದುಕೊಂಡಿವೆ. ಉಳಿದವು ರೋಗ ಬಂದು ಒಣಗಿವೆ ಎಂದರು.ಈಗ್ಗೆ ಮೂರು ವರ್ಷದ ಹಿಂದೆ ತಮಿಳುನಾಡಿಗೆ ಹೋಗಿ ಅಲ್ಲಿಂದ ಬರ‍್ಲಿ, ಕಮೀಜ್, ಮೆಡ್‌ಜುಲ್ ಹಾಗೂ ಎಲೈಟ್ ತಳಿಯ ೮೬ ಖರ್ಜೂರದ ಸಸಿಗಳನ್ನು ತಂದು ನಾಟಿ ಮಾಡಿರುವೆ. ಇವುಗಳಲ್ಲಿ ೮೦ ಗಿಡಗಳು ಉಳಿದುಕೊಂಡಿವೆ. ನಾನು ಸಸಿ ತಂದಾಗ, ಅವುಗಳನ್ನು ಬೆಳೆಸಿ ಒಂದು ವರ್ಷವಾಗಿತ್ತು. ಇಲ್ಲಿಗೆ ತಂದು ನಾಟಿ ಮಾಡಿ ಮೂರು ವರ್ಷಕ್ಕೆ ಅವುಗಳಲ್ಲಿ ೬ ಗಿಡಗಳು ಫಲ ನೀಡಿವೆ. ಒಂದೊಂದು ಗಿಡದಲ್ಲಿ ಎರಡೆರಡು ಗೊನೆಗಳು ಬಿಟ್ಟಿವೆ ಎಂದರು.
ಕರ್ಜೂರದ ಗಿಡಗಳಿಗೆ ಡೊಣ್ಣೆ ಹುಳು ಬಾಧೆ ಇದೆ. ಅವು ಗಿಡಗಳನ್ನು ಕೊರೆಯುತ್ತವೆ. ಹುಳುಗಳ ಹತೋಟಿಗಾಗಿ ಗಿಡಗಳಿಗೆ ಹುಳುಗಳನ್ನು ಆಕರ್ಷಿಸಿ, ನಾಶ ಪಡಿಸಲು ಅಗತ್ಯವಾದ ಪರಿಕರಗಳನ್ನು ಗಿಡಗಳಿಗೆ ಕಟ್ಟಿದ್ದೇನೆ. ಈ ವರ್ಷ ಖರ್ಜೂರ ಫಲ ನೀಡಿದೆ. ಇವುಗಳಿಗೆ ಯಾವುದೇ ಔಷಧ ಸಿಂಪಡಿಸಿಲ್ಲ. ಕುರಿ ಗೊಬ್ಬರ ನೀಡಿದ್ದೇವೆ ಎನ್ನುತ್ತಾರೆ ಅವರು.ಈ ವರ್ಷ ಕೇವಲ ೬ ಮರಗಳಲ್ಲಿ ಮಾತ್ರ ಫಲ ಇರುವುದರಿಂದ ನಾನು ಅವುಗಳನ್ನು ಮಾರಾಟ ಮಾಡಿಲ್ಲ. ಪರಿಚಯಸ್ಥರಿಗೆ ಅವುಗಳನ್ನು ಕೊಡುತ್ತಿದ್ದೇನೆ. ಎಲ್ಲ ಗಿಡಗಳಲ್ಲಿ ಒಮ್ಮೆಲೆ ಫಲ ಬಂದರೆ, ನಮಗೂ ಕಟಾವು ಮಾಡಿ ಮಾರಾಟ ಮಾಡಲು ಅನುಕೂಲವಾಗುತ್ತದೆ. ಮಾರಾಟಗಾರರು ತೋಟಕ್ಕೆ ಬಂದು ಅವುಗಳನ್ನು ಖರೀದಿಸಲು ಅನುಕೂಲವಾಗುತ್ತದೆ. ಈ ಹಣ್ಣುಗಳನ್ನು ಸಂಸ್ಕರಿಸಿ ಖರ್ಜೂರ, ಉತ್ತತ್ತಿ ತಯಾರಿಸುವ ವಿಧಾನ ತಿಳಿಯಬೇಕಿದೆ ಎಂದು ವಿವರಿಸಿದರು.
ಈಗೆಲ್ಲ ಮಾರುಕಟ್ಟೆಯಲ್ಲಿ ಗಿಡದಲ್ಲಿನ ಹಣ್ಣುಗಳನ್ನು ಸಂಸ್ಕರಿಸದೇ ಕೆಜಿಗೆ ₹೨೦೦ಯಂತೆ ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ. ಇವುಗಳನ್ನು ಸಂಸ್ಕೃರಿಸಿ, ಉತ್ತತ್ತಿ, ಕರ್ಜೂರವನ್ನಾಗಿಸಿ ಮೌಲ್ಯವರ್ಧನೆ ಮಾಡಿದರೆ, ಇನ್ನೂ ಉತ್ತಮ ಬೆಲೆ ಪಡೆಯಬಹುದಾಗಿದೆ. ಮುಂದಿನ ವರ್ಷ ಎಲ್ಲ ಗಿಡಗಳಲ್ಲಿ ಫಲ ದೊರೆಯಬಹುದೆಂಬ ಭರವಸೆ ಇದೆ ಎಂದು ತಮ್ಮ ಅನುಭವವನ್ನು ಹಾಗೂ ಸಂತಸವನ್ನು ಹಂಚಿಕೊಂಡರು.ಗಣಿನಾಡು ಸಂಡೂರು ತಾಲೂಕಿನಲ್ಲಿ ನಿಧಾನವಾಗಿ ಮಲೆನಾಡು ಮುಂತಾದೆಡೆ ಬೆಳೆಯುವ ವಾಣಿಜ್ಯ ಬೆಳೆಗಳು ಒಂದರ ಹಿಂದೆ ಒಂದರಂತೆ ಕಾಲಿಡುತ್ತಿವೆ. ಇವುಗಳ ಸಾಲಿಗೆ ಕಡಿಮೆ ನೀರಿರುವ ಪ್ರದೇಶಗಳು, ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಖರ್ಜೂರ ಬೆಳೆಯು ಸಂಡೂರು ಭಾಗದಲ್ಲಿ ನೆಲೆಯೂರುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಸಾಂಪ್ರದಾಯಿಕ ಆಹಾರ ಬೆಳೆಗಳ ಜೊತೆಗೆ ವಾಣಿಜ್ಯ ಬೆಳೆಗಳ ವಿಸ್ತೀರ್ಣವು ಹೆಚ್ಚಾಗಿ ರೈತರ ಆದಾಯ ದ್ವಿಗುಣವಾದರೆ ರೈತರ ಖುಷಿ ಹೆಚ್ಚುತ್ತದೆ. ಇದಕ್ಕೆ ಮಾರುಕಟ್ಟೆ, ಪ್ರಕೃತಿ ಸಹಕರಿಸಬೇಕಿದೆ.
ಸಂಡೂರು ತಾಲೂಕಿನ ಜಿಗೇನಹಳ್ಳಿಯ ರೈತ ಜೆ.ರಾಜಶೇಖರ ಪಾಟೀಲ್ ತೋಟದಲ್ಲಿ ಖರ್ಜೂರ ಬೆಳೆ ಚೆನ್ನಾಗಿ ಬಂದಿದೆ. ಇಲ್ಲಿನ ವಾತಾವರಣ ಖರ್ಜೂರ ಬೆಳೆಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಸಂಡೂರು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ.