ಇಂದಿನಿಂದ ದತ್ತ ಕ್ಷೇತ್ರದಲ್ಲಿ ಸಂಭ್ರಮದ ದತ್ತ ಜಯಂತಿ

| Published : Dec 14 2024, 12:45 AM IST

ಸಾರಾಂಶ

ಡಿ.15ರಂದು ಭವ್ಯ ರಥೋತ್ಸವ । ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸ್ಥಳಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ ಚವಡಾಪುರ:

ದಕ್ಷಿಣ ಭಾರತದ ಪವಿತ್ರ ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನದಲ್ಲಿ ಇಂದಿನಿಂದ ದತ್ತ ಜಯಂತಿ ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಹಾಗೂ ಸಾಲಕಾರಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವು ದತ್ತ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ದೇವಸ್ಥಾನದ ನೀತಿ, ನಿಯಮಗಳ ಪ್ರಕಾರ ಪೂಜೆ, ಆಚರಣೆಗಳು ನಡೆಯಲಿದ್ದು, ಡಿ.14ರಂದು ಮದ್ಯಾಹ್ನ 12 ಗಂಟೆಗೆ ದತ್ತ ಜಯಂತಿ ನಿಮಿತ್ತ ತೊಟ್ಟಿಲು ಉತ್ಸವ ಜರುಗಲಿದೆ. ಡಿ.15ರಂದು ದತ್ತ ದೇವಸ್ಥಾನದಿಂದ ಹನುಮಾನ್ ದೇವಸ್ಥಾನದವರೆಗೆ ಭವ್ಯ ರಥೋತ್ಸವ ಜರುಗಲಿದೆ ಎಂದರು.

ಎರಡು ದಿನಗಳ ಭವ್ಯ ಕಾರ್ಯಕ್ರಮದಲ್ಲಿ ಕರ್ನಾಟಕ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಗೋವಾ, ಕೇರಳ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಭಾಗಿಯಾಗಿ ದತ್ತ ಮಹಾರಾಜರ ಕೃಪೆಗೆ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ ವ್ಯವಸ್ಥೆ ಪರಿಶೀಲನೆ:

ದತ್ತ ಜಯಂತಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುವುದರಿಂದ ಯಾವುದೇ ರೀತಿಯ ಅಹಿತಕರ ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ವಾಹನ ದಟ್ಟಣೆ ತಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗಾಗಿ ನೀರು, ಶೌಚಾಲಯದ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ದೇವಲ ಗಾಣಗಾಪೂರ ಠಾಣೆ ಪಿಎಸ್‌ಐ ರಾಹುಲ್ ಪವಾಡೆ ಹಾಗೂ ತಂಡದವರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಲಕ್ಷಾಂತರ ಭಕ್ತರು ಭಾಗಿಯಾಗುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಸಂಭವಿಸದಂತೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಾಲಕಾರಿ ಕಾರ್ಯದರ್ಶಿ ಚೈತನ್ಯ ಪೂಜಾರಿ, ಋಷಿಕೇಶ ಪೂಜಾರಿ, ಪ್ರಸಾದ ಪೂಜಾರಿ, ಯೋಗೇಶ ಪೂಜಾರಿ, ಆದಿತ್ಯ ಪೂಜಾರಿ, ಬಾಲಕೃಷ್ಣ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಿಯಾಂಕ್ ಪೂಜಾರಿ, ಪ್ರಫುಲ್ ಪೂಜಾರಿ, ವಿಜಯಭಟ್ ಪೂಜಾರಿ, ಕಿರಣ ಪೂಜಾರಿ, ದೇವಸ್ಥಾನದ ಸಿಬ್ಬಂದಿ ದತ್ತು ನಿಂಬರ್ಗಿ ಸೇರಿದಂತೆ ಅನೇಕರು ಇದ್ದರು.