ಸಾರಾಂಶ
ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ದತ್ತಮಂದಿರದಲ್ಲಿ ಡಿ. 26ರಂದು ದತ್ತಜಯಂತಿ ಉತ್ಸವ, ಆರಾಧನೆ, ಗುರುಚರಿತ್ರೆಯ ಪಾರಾಯಣ ಮತ್ತು ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ದತ್ತಮಂದಿರದ ನೂತನ ಶಿಲಾಮಯ ದೇವಸ್ಥಾನದ ಭೂಮಿಪೂಜೆ ನೆರವೇರಲಿದೆ ಎಂದು ಶ್ರೀಮಠದ ಪ್ರತಿನಿಧಿ, ದತ್ತಮಂದಿರದ ಉಸ್ತುವಾರಿ, ಶ್ರೇಷ್ಠ ನ್ಯಾಯಾಲಯದ ವಕೀಲ ಎಸ್.ವಿ. ಯಾಜಿ ಹೇಳಿದರು.
ಅವರು ಶನಿವಾರ ಪಟ್ಟಣದ ನಾಯಕನಕೆರೆಯ ದತ್ತಮಂದಿರದಲ್ಲಿ ದತ್ತಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಈ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿವೆ. ೨೦೦೮ರಲ್ಲಿ ಈ ಮಂದಿರವನ್ನು ಸೀತಾರಾಮ ಹೆಗಡೆ ಅವರು ರಾಮಚಂದ್ರಾಪುರ ಮಠಕ್ಕೆ ಸಮರ್ಪಿಸಿದ್ದರು. ಆನಂತರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದೆ. ಈ ವರ್ಷ ಮಠದ ಅಧೀನಕ್ಕೆ ದತ್ತಮಂದಿರ ಸೇರ್ಪಡೆಯಾಗಿದೆ. ಇದು ೧೬ನೇ ದತ್ತ ಜಯಂತಿ ಉತ್ಸವವಾಗಿದೆ ಎಂದರು.ಶ್ರೀಗಳ ಆದೇಶದಂತೆ ನಾವು ಎಲ್ಲ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದ ಅವರು, ದತ್ತ ಜಯಂತಿಯಂದು ದತ್ತಾತ್ರೇಯ ಮೂಲ ಮಂತ್ರದಿಂದ ನಡೆಯುವ ಹವನದ ಪೂರ್ಣಾಹುತಿಯಲ್ಲಿ ರಾಘವೇಶ್ವರ ಶ್ರೀಗಳು ಪಾಲ್ಗೊಳ್ಳುವರು. ಆನಂತರ ಶಿಲಾಮಯ ಮಂದಿರದ ಶಿಲಾನ್ಯಾಸ ನೆರವೇರಿಸಿ, ನೂತನ ಗುಡಿಗೆ ಸಂಕಲ್ಪ ಮಾಡಿ, ಧರ್ಮಸಭೆಯ ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.
ಡಿ. ೨೦ರಿಂದ ೨೬ರ ವರೆಗೆ ಗುರುಚರಿತ್ರೆ ಪಾರಾಯಣ, ಸಂಜೆ ಪ್ರತಿನಿತ್ಯವೂ ಭಜನೆ, ಕೊನೆಯ ದಿನ ಹಿಂದೂಸ್ತಾನಿ ಗಾಯಕಿ ವಾಣಿ ಹೆಗಡೆ ಅವರ ಭಕ್ತಿ ಸಂಗೀತ ಪ್ರಸ್ತುತಗೊಳ್ಳಲಿದೆ. ವಿಶೇಷವಾಗಿ ಈ ಮಂದಿರದ ನಿರ್ಮಾಣ ಮತ್ತು ಉತ್ಸವದ ಸಂದರ್ಭದಲ್ಲಿ ಶ್ರೀಗಳ ನಿರ್ದೇಶನದಂತೆ ''''ದತ್ತಭಿಕ್ಷೆ'''' ಸುವಸ್ತು ಸಂಗ್ರಹ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರಿಗಾಗಿ ಕಾಯಿ, ಅಕ್ಕಿ ಸೇರಿದಂತೆ ದೇವರಿಗೆ ಅರ್ಪಿಸುವ ಸುವಸ್ತುಗಳು ದತ್ತಮಂದಿರದಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ, ವಿಶೇಷವಾಗಿ ೭ ದಿನಗಳ ಕಾಲ ದತ್ತಾತ್ರೇಯ ಗುಡಿ ನಿರ್ಮಾಣಕ್ಕಾಗಿ ಜೋಳಿಗೆ, ದತ್ತಭಿಕ್ಷೆ ಎಂಬ ಯೋಜನೆಯಡಿ ಮನೆಮನೆಗೆ ಸಮಿತಿ ವತಿಯಿಂದ ಪ್ರತಿನಿಧಿಗಳು ತೆರಳುತ್ತಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಿ, ತನು-ಮನ-ಧನದ ಸಹಾಯ ನೀಡುವಂತೆ ವಿನಂತಿಸಿದರು.ಅಭಿವೃದ್ಧಿ ಸಮಿತಿಯ ಪ್ರಮುಖರಾದ ಶಾಂತಾರಾಮ ಹೆಗಡೆ, ಪ್ರಸಾದ ಹೆಗಡೆ, ನಾಗರಾಜ ಮದ್ಗುಣಿ, ಶ್ರೀರಂಗ ಕಟ್ಟಿ, ನಾಗೇಶ ಯಲ್ಲಾಪುರಕರ್, ರಮೇಶ ಹೆಗಡೆ, ಸುಧೀಂದ್ರ ಪೈ, ಬಾಬು ಬಾಂದೇಕರ, ಅನಂತ ಬಾಂದೇಕರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.