ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತ ಮಾಲಾ ಅಭಿಯಾನ : ಬಂದೋಬಸ್ತ್‌ಗೆ 1600 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

| Published : Nov 10 2024, 01:57 AM IST / Updated: Nov 10 2024, 12:12 PM IST

ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತ ಮಾಲಾ ಅಭಿಯಾನ : ಬಂದೋಬಸ್ತ್‌ಗೆ 1600 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಕೊನೆ ದಿನವಾದ ಭಾನುವಾರ ವಿವಿಧ ಕಾರ್ಯಕ್ರಮಗಳ ನಡುವೆ ತೆರೆ ಬೀಳಲಿದೆ.

 ಚಿಕ್ಕಮಗಳೂರು : ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಕೊನೆ ದಿನವಾದ ಭಾನುವಾರ ವಿವಿಧ ಕಾರ್ಯಕ್ರಮಗಳ ನಡುವೆ ತೆರೆ ಬೀಳಲಿದೆ.

ಭಾನುವಾರ ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಧಾರ್ಮಿಕ ಸಭೆ, ಶೋಭಾಯಾತ್ರೆ ನಡೆಯಲಿದೆ. ಬಳಿಕ ದತ್ತಪೀಠಕ್ಕೆ ತೆರಳಲಿರುವ ಭಕ್ತರು ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಬಂದೋ ಬಸ್ತಿಗಾಗಿ ಸುಮಾರು 1600 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಗಳನ್ನು ಜಿಲ್ಲೆಯಾದ್ಯಂತ ನಿಯೋಜನೆ ಮಾಡಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀರಾಮ ಸೇನೆ ದತ್ತಮಾಲಾ ಅಭಿಯಾನ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ನ.4 ರಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಘಟನೆ ಕಾರ್ಯಕರ್ತರು ಅಭಿಯಾನದ ಅಂಗವಾಗಿ ಶನಿವಾರ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ ನೇತೃತ್ವದಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ (ಭಿಕ್ಷಾಟನೆ) ಸಂಗ್ರಹ ಮಾಡಿದರು.

ಮನೆಗಳಿಗೆ ಆಗಮಿಸಿದ ಮಾಲಾಧಾರಿಗಳಿಗೆ ಅಕ್ಕಿ, ಬೆಲ್ಲ ಹಾಗೂ ಬಾಳೆ ಹಣ್ಣು ನೀಡಿದರು. ಈ ರೀತಿಯಲ್ಲಿ ಸಂಗ್ರಹವಾದ ಪಡಿಯನ್ನು ದತ್ತಪೀಠದಲ್ಲಿ ದತ್ತ ಪಾದುಕೆಗಳ ದರ್ಶನದ ನಂತರ ಸಮರ್ಪಣೆಯಾಗಲಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಶಂಕರಮಠದ ಮುಂಭಾಗದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಈ ಸಭೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹಾಗೂ ಸಂಘಟನೆ ಮುಖಂಡರು ಆಗಮಿಸಲಿದ್ದಾರೆ. ಬಳಿಕ ಇಲ್ಲಿಂದಲೇ ಶೋಭಾಯಾತ್ರೆ ಹೊರಡಲಿದೆ.

ಈ ಯಾತ್ರೆಯೂ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮೂಲಕ ಆಜಾದ್‌ ಪಾರ್ಕ್‌ ವೃತ್ತ ತಲುಪಲಿದೆ. ಈ ದಾರಿಯ ಉದ್ದಕ್ಕೂ ಕೇಸರಿ ಧ್ವಜ, ಬ್ಯಾನರ್‌ಗಳನ್ನು ಕಟ್ಟಿ ಶೃಂಗಾರಗೊಳಿಸಲಾಗಿದೆ. ಧಾರ್ಮಿಕ ಸಭೆ ನಂತರ ದತ್ತಮಾಲಾ ಧಾರಿಗಳು ದತ್ತಪೀಠಕ್ಕೆ ವಾಹನಗಳಲ್ಲಿ ತೆರಳಲಿದ್ದಾರೆ. ಮಾರ್ಗ ಮಧ್ಯದಲ್ಲಿರುವ ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿಂದ ಕೆಲವರು ಪಾದಯಾತ್ರೆಯಲ್ಲಿ ದತ್ತಪೀಠಕ್ಕೆ ತೆರಳಲಿದ್ದಾರೆ.

ಅಲ್ಲಿ ಸರದಿ ಸಾಲಿನಲ್ಲಿ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಇಲ್ಲಿ ನಡೆಯಲಿರುವ ಪೂಜೆ ಹಾಗೂ ಹೋಮದಲ್ಲಿ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಗುಹೆ ಒಳ ಭಾಗದಲ್ಲಿ ಮೊಬೈಲ್‌, ಪೋಟೋ ತೆಗೆಯುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿದೆ.

24 ಚೆಕ್‌ ಪೋಸ್ಟ್‌:

ದತ್ತಪೀಠದಲ್ಲಿ ಭಾನುವಾರ ನಡೆಯಲಿರುವ ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಒಬ್ಬರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ, 7 ಮಂದಿ ಡಿವೈಎಸ್ಪಿ, 15 ಜನ ಪೊಲೀಸ್ ಇನ್ಸ್‌ಸ್ಪೆಕ್ಟರ್‌, 90 ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌, 1500 ಪೊಲೀಸ್‌ ಸಿಬ್ಬಂದಿ, 8 ಕೆಎಸ್‌ಆರ್‌ಪಿ, 11 ಡಿಎಆರ್‌, 2 ಬಾಂಬ್‌ ಪತ್ತೆ ದಳ ನಿಯೋಜನೆ ಮಾಡಲಾಗಿದೆ. ಈ ಸಿಬ್ಬಂದಿ ಶನಿವಾರದಿಂದಲೇ ಕಾರ್ಯನಿರ್ವಹಿಸುತ್ತಿವೆ.

ಈ ಬಾರಿ ಬಂದೋಬಸ್ತಿಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು 400 ಮಂದಿ ಪೊಲೀಸ್‌ ಸಿಬ್ಬಂದಿ ಆಗಮಿಸಿದ್ದಾರೆ. ಜಿಲ್ಲಾ ಪೊಲೀಸ್‌ ಇಲಾಖೆ ಜಿಲ್ಲೆಯಾದ್ಯಂತ 24 ಚೆಕ್‌ ಪೋಸ್ಟ್‌ಗಳನ್ನು ತೆರೆದಿದೆ.

ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಜಿಲ್ಲಾಡಳಿತ 42 ಮಂದಿ ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿದೆ. ಈ ಪೈಕಿ ಕಂದಾಯ ಇಲಾಖೆ ತೆರೆದಿರುವ 32 ಚೆಕ್‌ ಪೋಸ್ಟ್‌ಗಳಲ್ಲಿ ಓರ್ವರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇನ್ನುಳಿದ 10 ಮಂದಿ ಇನ್ಯಾವುದೇ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವುದು ಕಂಡು ಬಂದರೆ ಅಲ್ಲಿಗೆ ತೆರಳಲಿದ್ದಾರೆ.

ಒಟ್ಟಾರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆ ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.-- ಬಾಕ್ಸ್‌ --ಗುರುಗಳಿಗೆ ಪ್ರಿಯವಾದ ಪಡಿ ಸಂಗ್ರಹಣೆಯನ್ನು ಇಂದು ಮಾಡುತ್ತಿದ್ದೇವೆ. ದತ್ತಮಾಲೆ ಧಾರಣೆ ಮಾಡಿದ ಬಳಿಕ ಭಿಕ್ಷಾಟನೆ ಮಾಡಿ, ಪಡಿ ಸಂಗ್ರಹಿಸಿದಾಗ ನಮ್ಮ ಮನಸ್ಸಿನಲ್ಲಿರುವ ಲೋಭ, ಅಹಂಕಾರವೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯ. ಹೀಗಾಗಿ ನಾವೂ ದತ್ತಮಾಲೆ ಧರಿಸಿ, ಪಡಿ ಸಂಗ್ರಹಣೆ ಮಾಡಿದ್ದೇವೆ.

ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶ್ರೀರಾಮ ಸೇನೆ ಕಾರ್ಯಕರ್ತರು ಪಡಿ ಸಂಗ್ರಹಣೆ ಮಾಡಿದ್ದಾರೆ. ಭಾನುವಾರ ದತ್ತಪೀಠದಲ್ಲಿ ವಿಶೇಷ ಹೋಮ-ಹವನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಶ್ರೀರಾಮಸೇನೆ ಕಾರ್ಯಕರ್ತರು ಆಗಮಿಸಲಿದ್ದಾರೆ.

ಸಾವಿರಾರು ದತ್ತಮಾಲಾಧಾರಿಗಳು ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ, ಧರ್ಮಸಭೆ ನಡೆಸಿ ಇರುಮುಡಿ ಹೊತ್ತು ದತ್ತಾತ್ರೇಯ ಹಾಗೂ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂ ಪೀಠವೇ ಆಗಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ಶೀಘ್ರವೇ ದತ್ತಪೀಠವನ್ನು ಹಿಂದುಗಳ ಪೀಠವೆಂದು ಘೋಷಿಸಬೇಕು. 

- ಗಂಗಾಧರ್‌ ಕುಲಕರ್ಣಿ

ರಾಜ್ಯಾಧ್ಯಕ್ಷರು ಶ್ರೀರಾಮ ಸೇನೆ