ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಕೊಲ್ಕಾತದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಲ್ಲಿನ ಕಿರಿಯ ವೈದ್ಯರ ಹೋರಾಟವನ್ನು ಬೆಂಬಲಿಸಿ ನಗರದಲ್ಲಿ ಕಿರಿಯ ವೈದ್ಯರು ಮಂಗಳವಾರ ಸರಣಿ ಉಪವಾಸ ಸತ್ಯಾಗ್ರ ಆರಂಭಿಸಿದರು.ನಗರದ ಎಂಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಐಎಂಎ ಹಾಲ್ ಮುಂಭಾಗದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ದಾವಣಗೆರೆ ಘಟಕ ಹಾಗೂ ಮಹಿಳಾ ವೈದ್ಯೆರ ವಿಭಾಗದ ನೇತೃತ್ವದಲ್ಲಿ ಹಿರಿಯ-ಕಿರಿಯ ವೈದ್ಯರ ಸಹಯೋಗದಲ್ಲಿ ಕೊಲ್ಕತ್ತಾದ ಪ್ರತಿಭಟನಾ ನಿರತ ಕಿರಿಯ ವೈದ್ಯರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಐಎಂಎ ಅಧ್ಯಕ್ಷ ಡಾ.ಹರ್ಷ, ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ, ಭೀಕರ ಹತ್ಯೆ ಇಡೀ ನಾಗರೀಕ ಸಮಾಜವನ್ನು ಆತಂಕಕ್ಕೆ ನೂಕಿದೆ. ಇಂತಹ ಘಟನೆಗಳಿಂದಾಗಿ ವೈದ್ಯರು, ವಿಶೇಷವಾಗಿ ಮಹಿಳಾ ವೈದ್ಯೆ ರು, ಕಿರಿಯ ವೈದ್ಯೆಯರು, ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯಕೀಯ ಸಿಬ್ಬಂದಿ ಕೆಲಸ ನಿರ್ವಹಿಸಲು ಭಯಪಡುವಂತಾಗಿದೆ ಎಂದರು.ಕೊಲ್ಕತ್ತಾದಲ್ಲಿ 25 ಕಿರಿಯ ವೈದ್ಯೆಯರು ಕಳೆದ 9 ದಿನಗಳಿಂದಲೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಪೈಕಿ ಕೆಲವರು ತೀವ್ರ ಅಸ್ವಸ್ಥತೆಯಿಂದ ನಿತ್ರಾಣರಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇಷ್ಟೆಲ್ಲಾ ನಡದರೂ ಸಹಿತ ಪಶ್ಚಿಮ ಬಂಗಾಳ ಸರ್ಕಾರವಾಗಲೀ, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಕ್ತ ಸ್ಪಂದನೆ ತೋರದಿರುವುದು ದುರಂತ. ಇನ್ನಾದರೂ ಅಲ್ಲಿನ ಸರ್ಕಾರ ಧರಣಿ ನಿರತ ವೈದ್ಯರು, ವೈದ್ಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲಿ ಎಂದು ಅವರು ಆಗ್ರಹಿಸಿದರು.
ಕಿರಿಯ ವೈದ್ಯ ಡಾ.ನಿಶಾಂತ ವಿ.ಸಪ್ತಗಿರಿ ಮಾತನಾಡಿ, ಪಶ್ಚಿಮ ಬಂಗಾಳದ ಆರ್‌ಜಿಕರ್ ಆಸ್ಪತ್ರೆಯವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹತ್ಯೆಯಾಗಿದೆ. ಘಟನೆ ನಡೆದು ಹಲವು ದಿನ ಕಳೆದರೂ ಅಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿದ್ದು, ಮೃತ ವೈದ್ಯಯ ಸಾವಿಗೆ ನ್ಯಾಯ ಕೊಡಿಸುವ ಸಣ್ಣ ಪ್ರಯತ್ನವೂ ಕೂಡ ಮಾಡಿಲ್ಲ. ಅನಿವಾರ್ಯವಾಗಿ ಅಲ್ಲಿನ ವೈದ್ಯ ವಿದ್ಯಾರ್ಥಿಗಳು ಹೋರಾಟದ ಹಾದಿ ತುಳಿದರೂ ಅಲ್ಲಿನ ಸರ್ಕಾರ ಮೌನವಾಗಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಹತ್ಯೆಯಾದ ವೈದ್ಯ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗಬೇಕು, ಅತ್ಯಾಚಾರಿ, ಹಂತಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರು ಕೊಲ್ಕತ್ತಾದಲ್ಲಿ ಅಮರಣಾಂತ ಉಪವಾಸ ನಡೆಸಿದ್ದಾರೆ. ಈಗಾಗಲೇ ನಾಲ್ವರು ಗಂಭೀರ ಪರಿಸ್ಥಿತಿಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ. ವೈದ್ಯೆಯ ಮೇಲೆ ನಡೆದ ಕ್ರೌರ್ಯ, ಹತ್ಯೆಯಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಐಎಂಎ ಪದಾಧಿಕಾರಿಗಳಾದ ಡಾ.ಗಣೇಶ, ಡಾ.ಮಹೇಶ ಸೇರಿದಂತೆ ಹಿರಿಯ, ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ನ್ಯಾಯ ಸಿಗವವರೆಗೂ ಹೋರಾಟ: ಡಾ.ನಿಶಾಂತ
ದಾವಣಗೆರೆಯಲ್ಲೂ ಕರ್ತವ್ಯ ನಿರತ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಮೇಲೆ ಈಚೆಗೆ ಹಲ್ಲೆ, ದೌರ್ಜನ್ಯಗಳಾಗಿವೆ. ಕರ್ನಾಟಕದಲ್ಲೂ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಿ, ಭದ್ರತೆ, ರಕ್ಷಣೆ ಒದಗಿಸುವ ಕೆಲಸ ಆಗಬೇಕು. ಕೊಲ್ಕತ್ತಾ ಪ್ರತಿಭಟನಾ ನಿರತರ ಬೇಡಿಕೆ ಈಡೇರಿಸುವಂತೆ ನಿತ್ಯ ಬೆಳಗ್ಗೆ 6ರಿಂದ ಸಂಜೆ 6ರವರೆಗೆ 30 ವೈದ್ಯ ವಿದ್ಯಾರ್ಥಿಗಳು, ಹಿರಿಯ ವೈದ್ಯರು ದಾವಣಗೆರೆ ಐಎಂಎ ಸಭಾಂಗಣದ ಬಳಿ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ಎಂದು ಡಾ.ನಿಶಾಂತ ಎಚ್ಚರಿಸಿದರು.