ಹರಪನಹಳ್ಳಿ: ಕಲುಷಿತ ನೀರು ಸೇವಿಸಿ 2 ಸಾವು - ವಾಂತಿ-ಭೇದಿ : 15 ಮಂದಿ ಆಸ್ಪತ್ರೆಗೆ

| Published : Oct 22 2024, 08:24 AM IST

contaminated water
ಹರಪನಹಳ್ಳಿ: ಕಲುಷಿತ ನೀರು ಸೇವಿಸಿ 2 ಸಾವು - ವಾಂತಿ-ಭೇದಿ : 15 ಮಂದಿ ಆಸ್ಪತ್ರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

 ಹರಪನಹಳ್ಳಿ ತಾಲೂಕಿನ ಟಿ.ತುಂಬಿಗೇರಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಇಬ್ಬರು ಮೃತಪಟ್ಟಿದ್ದಾರೆ.

ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಟಿ.ತುಂಬಿಗೇರಿಯಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಭೋವಿ ಸುರೇಶ (32) ಎಂಬುವರು ಸೋಮವಾರ ಮೃತಪಟ್ಟಿದ್ದರೆ, ಭೋವಿ ಮಹಾಂತೇಶ (35) ಎಂಬುವರು ನಾಲ್ಕು ದಿನದ ಹಿಂದೆ ಮೃತಪಟ್ಟಿದ್ದಾರೆ. ಈ ಮಧ್ಯೆ, ಗ್ರಾಮದಲ್ಲಿ ವಾಂತಿ-ಭೇದಿಯಿಂದ 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲುಷಿತ ನೀರು ಸೇವನೆಯೇ ಇವರ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ತಾಲೂಕು ಆರೋಗ್ಯಾಧಿಕಾರಿಗಳು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವುದನ್ನು ದೃಢಪಡಿಸಿಲ್ಲ. ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ನೀರಿನ ಪೈಪ್‌ ಒಡೆದು, ಅದಕ್ಕೆ ಚರಂಡಿ ನೀರು ಸೇರಿ ನೀರು ಕಲುಷಿತಗೊಂಡಿದೆ. ಅದೇ ಕಲುಷಿತ ನೀರು ಕುಡಿದ ಜನರು ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ. 11 ಮಂದಿ ದಾವಣಗೆರೆ ಆಸ್ಪತ್ರೆಯಲ್ಲಿ, ನಾಲ್ವರು ತೆಲಿಗಿ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಪೃಥ್ವಿ ಹಾಗೂ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಷಣ್ಮುಖಪ್ಪ ಅವರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಕೂಡಲೇ ಶುದ್ಧ ನೀರು ಪೂರೈಕೆ ಮಾಡಬೇಕು. ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ವಾಂತಿ-ಭೇದಿಯಿಂದ ಮೃತಪಟ್ಟಿರುವುದು ಇನ್ನೂ ದೃಢಪಟ್ಟಿಲ್ಲ. ಇಲ್ಲಿನ ನೀರಿನ ಲಾರ್ವದ ಸರ್ವೇ ಮಾಡಲಾಗಿದೆ. ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ಹೊರಬರಲಿದೆ. ಗ್ರಾಮದಲ್ಲಿ ಕೊಳಚೆ ಪ್ರದೇಶ ಸಾಕಷ್ಟು ಇದೆ. ಬ್ಲೀಚಿಂಗ್‌ ಪೌಡರ್ ಹಾಕಿಸಿದ್ದೇವೆ. ಗ್ರಾಮಸ್ಥರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.

- ಪೃಥ್ವಿ, ತಾಲೂಕು ಆರೋಗ್ಯಾಧಿಕಾರಿ

ಪೈಪ್‌ಲೈನ್‌ ದುರಸ್ತಿ ಮಾಡಿಸಿದ್ದೇವೆ. ಸದ್ಯ ಗ್ರಾಮಕ್ಕೆ ಬೇರೆ ಕಡೆಯಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದೇವೆ.

- ಕಿರಣಕುಮಾರ ನಾಯ್ಕ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ