- ಒಟ್ಟು 13 ಟೇಬಲ್‌ನಲ್ಲಿ 21 ಸುತ್ತಿನ ಎಣಿಕೆ, 25 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ - ಡಿಆರ್‌ಆರ್ ಮತ ಎಣಿಕಾ ಕೇಂದ್ರಕ್ಕೆ 3 ಹಂತದ ಭದ್ರತೆ: ಚುನಾವಣಾಧಿಕಾರಿ ಸಂತೋಷಕುಮಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ನಗರದ ಡಿಆರ್‌ಆರ್‌ ಶಾಲೆಯಲ್ಲಿ ಮೇ 4ರಂದು ಒಟ್ಟು 13 ಟೇಬಲ್‌ನಲ್ಲಿ 21 ಸುತ್ತುಗಳಲ್ಲಿ ನಡೆಯಲಿದೆ. ಮತಗಳ ಎಣಿಕೆಗೆ ಎಲ್ಲ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಡಿಜಿಟಲ್ ತಪಾಸಣೆ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಸಂತೋಷಕುಮಾರ ತಿಳಿಸಿದ್ದಾರೆ.

ನಗರದ ಮಹಾನಗರ ಪಾಲಿಕೆಯಲ್ಲಿ ಸ್ಥಾಪಿಸಿರುವ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಭ್ಯರ್ಥಿಗಳು, ಏಜೆಂಟರು ಹಾಗೂ ಸಿಬ್ಬಂದಿಗೆ ಕ್ಯೂಆರ್‌ ಕೋಡ್ ಹೊಂದಿರುವ ಡಿಜಿಟಲ್ ಗುರುತಿನ ಟೀಟಿ ನೀಡಲಾಗಿದೆ. ಜಿಲ್ಲಾಡಳಿತವು ಎಲ್ಲ ರೀತಿಯ ತಾಂತ್ರಿಕ ಹಾಗೂ ಭದ್ರತಾ ಸಿದ್ಧತೆಗಳನ್ನೂ ಪೂರ್ಣಗೊಳಿಸಿದ್ದು, ಮತ ಎಣಿಕೆ ಸರಾಗವಾಗಿ, ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದರು.


ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಎಣಿಕೆಗೆ 1 ಕೊಠಡಿ ಹಾಗೂ ಅಂಚೆ ಮತಪತ್ರ ಎಣಿಕೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದೆ. ಸೋಮವಾರ ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು ಮತ್ತು ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗುವುದು. ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದೆ. ಅನಂತರ 8.30ರಿಂದ ಇವಿಎಂ ಯಂತ್ರಗಳ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ ಎಂದು ಅವರು ಹೇಳಿದರು.

ಕ್ಷೇತ್ರದ ಮತ ಎಣಿಕೆಗಾಗಿ ಒಟ್ಟು 14 ಟೇಬಲ್‌ ಅಳವಡಿಸಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್‌ಗಾಗಿ ಪ್ರತ್ಯೇಕ 1 ಟೇಬಲ್ ವ್ಯವಸ್ಥೆ ಮಾಡಿದೆ. 21 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಪ್ರತಿ ಟೇಬಲ್‌ಗೆ ಕೌಂಟಿಂಗ್ ಸೂಪರ್‌ವೈಸರ್, ಮೈಕ್ರೋ ಅಬ್ಸರ್ವರ್ ಹಾಗೂ ಕೌಂಟಿಂಗ್ ಅಸಿಸ್ಟೆಂಟ್ಸ್‌ ನೇಮಿಸಲಾಗಿದೆ. ಮತ ಎಣಿಕೆ ಕಾರ್ಯದ ದಿನ ಬೆಳಗ್ಗೆ 5ರಿಂದ ಸಿಬ್ಬಂದಿಗೆ ಅಂತಿಮ ಹಂತದ ಟೇಬಲ್ ಹಂಚಿಕೆ ಪ್ರಕ್ರಿಯೆ **(Third Randomization)** ನಡೆಯಲಿದೆ ಎಂದು ಅವರು ತಿಳಿಸಿದರು.

ಮತ ಎಣಿಕೆ ಕೇಂದ್ರದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ 3 ಹಂತದ ಭದ್ರತೆ ಕೈಗೊಂಡಿದೆ. ಮೊದಲ ಹಂತದಲ್ಲಿ ಮತ ಎಣಿಕೆ ಕೇಂದ್ರದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಪಾದಾಚಾರಿ ವಲಯವೆಂದು ಘೋಷಿಸಿದ್ದು, ಅಲ್ಲಿ ವಾಹನ ಸಂಚಾರ ನಿರ್ಬಂಧಿಸಿದೆ. ಕೇಂದ್ರದ ಎರಡನೇ ಹಂತದಲ್ಲಿ ಡಿ.ಎ.ಆರ್. ಪೊಲೀಸರು ತಪಾಸಣೆ ನಡೆಸಲಿದ್ದಾರೆ. 3ನೇ ಹಂತದಲ್ಲಿ ಮತ ಎಣಿಕೆ ಕೊಠಡಿಯ ಪ್ರವೇಶ ದ್ವಾರದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಅತ್ಯಾಧುನಿಕ ತಪಾಸಣೆ ನಡೆಸಲಿದ್ದಾರೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪ್ರತಿ ಟೇಬಲ್‌ಗೆ ಒಬ್ಬರಂತೆ ಅಭ್ಯರ್ಥಿಗಳು ತಮ್ಮ ಏಜೆಂಟರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಕಟ್ಟುನಿಟ್ಟಾದ ನಿಯಮ ಪಾಲಿಸಬೇಕು. ಅಧಿಕೃತ ಪಾಸ್ ಇಲ್ಲದ ಯಾರಿಗೂ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಈ ಸಲದ ವಿಶೇಷವೆಂದರೆ, ಅಭ್ಯರ್ಥಿಗಳು, ಏಜೆಂಟರು ಹಾಗೂ ಸಿಬ್ಬಂದಿಗೆ ಕ್ಯೂಆರ್ ಕೋಡ್ ಹೊಂದಿರುವ ಡಿಜಿಟಲ್ ಗುರುತಿನ ಚೀಟಿ ನೀಡಲಾಗಿದೆ. ಸಿ.ಐ.ಎಸ್.ಎಫ್. ಸಿಬ್ಬಂದಿ ಮೊಬೈಲ್ ಆಪ್ ಮೂಲಕ ಈ ಕೋಡ್ ಸ್ಕ್ಯಾನ್ ಮಾಡಿ ಅಧಿಕೃತತೆ ಖಚಿತಪಡಿಸಿಕೊಂಡ ನಂತರವೇ ಒಳಗೆ ಬಿಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರದೊಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕಾ ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ಕಣ್ಗಾವಲು ವಹಿಸಿ, ನಿಗಾ ಇಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮಾಧ್ಯಮದವರಿಗೆ ಪ್ರತ್ಯೇಕ ಮೀಡಿಯಾ ಸೆಂಟರ್ ಸ್ಥಾಪಿಸಲಾಗಿದೆ. ಅಲ್ಲಿ ಇಂಟರ್ನೆಟ್‌, ಫಲಿತಾಂಶ ವೀಕ್ಷಣೆಗೆ ಸ್ಮಾರ್ಟ್ ಟಿವಿ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯ ಎಣಿಕೆ ಕಾರ್ಯಕ್ಕೆ ಸಂಪೂರ್ಣವಾಗಿ ಸಿಸಿ ಟಿವಿ ಅಳವಡಿಸಲಾಗಿದೆ. ಅಲ್ಲದೇ, ವೀಡಿಯೋಗ್ರಫಿ ಸಹ ಮಾಡಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ತಹಸೀಲ್ದಾರ್ ಗುರುಬಸವರಾಜ, ಹರಿಹರ ತಾಲೂಕು ತಹಸೀಲ್ದಾರ ಸಂತೋಷ ಇತರರು ಇದ್ದರು.

- - -

(ಕೋಟ್‌) ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಮತದಾರರಿಂದ 217 ಮತಪತ್ರ ಮತ್ತು 10 ಅಂಚೆ ಮತಗಳನ್ನು ಸ್ವೀಕರಿಸಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆಯ ನಂತರ ಫಲಿತಾಂಶದ ವಿವರಗಳನ್ನು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಆನ್‌ಲೈನ್ ಮೂಲಕ ಮಾಧ್ಯಮಗಳಿಗೆ ತಕ್ಷಣವೇ ಒದಗಿಸಲಾಗುವುದು. ಚುನಾವಣಾ ನೀತಿ ಸಂಹಿತೆ **(MCC)** ಜಾರಿಯಲ್ಲಿ ಇರುವುದರಿಂದ ಯಾವುದೇ ರೀತಿಯ ವಿಜಯೋತ್ಸವ ಅಥವಾ ಮೆರವಣಿಗೆಗಳನ್ನು ನಡೆಸುವಂತಿಲ್ಲ. - ಸಂತೋಷಕುಮಾರ, ಚುನಾವಣಾಧಿಕಾರಿ, ದಾವಣಗೆರೆ ದಕ್ಷಿಣ ಕ್ಷೇತ್ರ.

- - -

(-ಫೋಟೋ ಇದೆ.)