ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಬೇಕೆಂಬ ದೊಡ್ಡ ಕೂಗು ಇದ್ದು, ನಿಮ್ಮ ಧ್ವನಿಗೆ ನಾನೂ ದನಿಗೂಡಿಸುವ ಮೂಲಕ ಬೆಂಬಲಿಸುತ್ತೇನೆ. ಅಲ್ಲದೇ, ನಾನು, ನಮ್ಮ ಪರಿವಾರ, ನಮ್ಮ ಪಕ್ಷವೂ ನಿಮ್ಮ ಬೇಡಿಕೆ ಪರವಾಗಿ ನಿಲ್ಲುತ್ತವೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಸುರೇಶ ಕುಮಾರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಬೇಕೆಂಬ ದೊಡ್ಡ ಕೂಗು ಇದ್ದು, ನಿಮ್ಮ ಧ್ವನಿಗೆ ನಾನೂ ದನಿಗೂಡಿಸುವ ಮೂಲಕ ಬೆಂಬಲಿಸುತ್ತೇನೆ. ಅಲ್ಲದೇ, ನಾನು, ನಮ್ಮ ಪರಿವಾರ, ನಮ್ಮ ಪಕ್ಷವೂ ನಿಮ್ಮ ಬೇಡಿಕೆ ಪರವಾಗಿ ನಿಲ್ಲುತ್ತವೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಸುರೇಶ ಕುಮಾರ ಭರವಸೆ ನೀಡಿದರು.

ನಗರದ ಜಿಲ್ಲಾ ವಕೀಲರ ಸಭಾ ಭವನದಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಕೆ.ಎಂ.ಸುರೇಶ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, 2008ರಲ್ಲಿ ತಾವು ಕಾನೂನು ಸಚಿವರಿದ್ದಾಗ ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಉದ್ಘಾಟನೆಗೊಂಡಿದ್ದವು ಎಂದರು.

ನಾಡಿನ ಕೇಂದ್ರ ಬಿಂದು ದಾವಣಗೆರೆಯಲ್ಲೂ ಹೈಕೋರ್ಟ್ ಪೀಠದ ಅಗತ್ಯವಿದೆ. ವಕೀಲರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಹ ಈ ಬಗ್ಗೆ ಧ್ವನಿ ಎತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಚುನಾವಣೆಗಳು ಜನರಿಗೆ ತಮ್ಮ ಭಾವನೆ ವ್ಯಕ್ತಪಡಿಸಲು ಇರುವ ಅವಕಾಶವಾಗಿದೆ. ಅಂತಹ ಅವಕಾಶವನ್ನು ಪದವೀಧರ ಮತದಾರರು ಸಮರ್ಥವಾಗಿ ಬಳಸಬೇಕು. ವಿಪ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಮುಖಂಡರಾದ ಕೆ.ಎಂ.ಸುರೇಶ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾನು ಕೆ.ಎಂ.ಸುರೇಶ ಪರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದು, ನೀವೆಲ್ಲರೂ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶರಿಗೆ ಮತ ನೀಡುವ ಮೂಲಕ ಬೆಂಬಲಿಸಿ, ಗೆಲ್ಲಿಸಬೇಕು. ಆಗ್ನೇಯ ಪದವೀಧರರ ಕ್ಷೇತ್ರದ 10 ಚುನಾವಣೆಯಲ್ಲಿ 8 ಸಲ ಬಿಜೆಪಿ ಗೆದ್ದಿದೆ. 2 ಸಲ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಿಂದ ಗೆದ್ದಿದ್ದ ಡಾ.ಎ.ಎಚ್.ಶಿವಯೋಗಿಸ್ವಾಮಿ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು. ಎನ್‌ಡಿಎ ಅಭ್ಯರ್ಥಿಯಾದ ಬಿಜೆಪಿಯ ಕೆ.ಎಂ.ಸುರೇಶ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸಜ್ಜನಿಕೆ ಇರುವ, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ. ಮೇಲ್ಮನೆಯಲ್ಲಿ ಪ್ರಜ್ಞಾವಂತ ಸದಸ್ಯರ ಅಗತ್ಯವಿದೆ. ದಾವಣಗೆರೆಯ 400 ವಕೀಲರು ಪದವೀಧರರ ಕ್ಷೇತ್ರಕ್ಕೆ ನೋಂದಣಿಯಾಗಿದ್ದಾರೆ. ಪದವೀಧರರ ಕ್ಷೇತ್ರದಲ್ಲಿ ತಿರಸ್ಕೃತ ಮತಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹದ್ದು ಮರುಕಳಿಸದಂತೆ ತಡೆಯಬೇಕು ಎಂದು ಮನವಿ ಮಾಡಿದರು.

ನಾನು ಯಾವುದೇ ಜಿಲ್ಲೆ. ಊರಿನ ವಕೀಲರ ಸಂಘಕ್ಕೆ ಹೋದಾಗ ಕುಟುಂಬ ಸದಸ್ಯರನ್ನು ಭೇಟಿಯಾದಂತಾಗುತ್ತದೆ. ನಾನೊಬ್ಬ ಒಳ್ಳೆಯ ಲಾಯರ್ ಆಗಬೇಕೆಂದು ಬಯಸ್ಸಿದ್ದವನು. ಆದರೆ, ಕಾನೂನು ಸಚಿವನಾದೆ. ಓರ್ವ ಸರ್ಕಾರಿ ಶಾಲೆಯ ಶಿಕ್ಷಕರ ಮಗನಾದ ನಾನು ಶಿಕ್ಷಣ ಸಚಿವನೂ ಆದೆ ಎಂದು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಹರಿಹರ ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ವಕೀಲರ ಸಂಘದ ಟಿ.ಆರ್.ಗುರುಬಸವರಾಜ, ಉಪಾಧ್ಯಕ್ಷ ಕೆ.ಜಿ.ಕೆ. ಸ್ವಾಮಿ, ಕಾರ್ಯದರ್ಶಿ ಎಸ್.ಮಂಜು, ಕೆ.ಎಸ್.ರೇವಣಸಿದ್ದಪ್ಪ, ವಸಂತಕುಮಾರ್, ಎ.ಸಿ.ರಾಘವೇಂದ್ರ ಮೊಹರೆ, ಕಾಕನೂರು ಮಂಜಪ್ಪ, ಎಚ್.ದಿವಾಕರ, ಎಚ್‌.ಕೆ.ಅಶೋಕ, ಬೇತೂರು ಬಸವನಗೌಡ, ಧನಂಜಯ, ಮಹೇಶ ನಾಯ್ಕ, ಜೆಡಿಎಸ್ ಜಿಲ್ಲಾ ಸಂಚಾಲಕ ಎಚ್.ಎಸ್.ಯೊಗೇಶ್, ಮಾಜಿ ಯೋಧ ಮನೋಹರ ಮಹೇಂದ್ರಕರ್, ಬಿಜೆಪಿ ಮುಖಂಡರಾದ ಎಸ್.ಎಂ.ವಿರೇಶ್ ಹನಗವಾಡಿ, ಧನಂಜಯ ಕಡ್ಲೇಬಾಳ್‌, ಆರ್.ಲಕ್ಷ್ಮಣ, ಐರಣಿ ಅಣ್ಣೇಶ, ಎಚ್.ಪಿ.ವಿಶ್ವಾಸ, ಹರಿಹರದ ರಾಜು ರೋಖಡೆ, ಎಂ.ಪಿ.ಲಿಂಗರಾಜ, ರಮೇಶ, ವೀರೇಶ, ತಿಪ್ಪೇಸ್ವಾಮಿ ಇತರರು ಇದ್ದರು.

ಪಿತ್ತ ನೆತ್ತಿಗೇರಿದಾಗ ಇಂತಹ ಮಾತು ಬರುತ್ತವೆ: ಸಿಎಂ ಹೇಳಿಕೆಗೆ ಕಿಡಿ

ದಾವಣಗೆರೆ: ಪಿತ್ತ ನೆತ್ತಿಗೇರಿದಾಗ ಇಂತಹ ಪದಗಳು, ಮಾತುಗಳು ಬರುತ್ತವೆ ಎಂದು ಸುರೇಶಕುಮಾರ್‌, ಸಿಎಂ ಡಿ.ಕೆ.ಶಿವಕುಮಾರ್‌ ಸ್ವಾಮೀಜಿಗಳಿಗೆ ಹೇಳಿದ ಮಾತುಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸೇವೆ ಮಾಡಿದರೆ ಮುಕ್ತಿ ಸಿಗುತ್ತದೆಂದು ಸ್ವಾಮೀಜಿಗಳಿಗೆ ಹೇಳಿರುವುದು ಪಿತ್ತ ನೆತ್ತಿಗೇರಿದಾಗ ಮಾತ್ರ ಇಂತಹ ಪದ, ಮಾತುಗಳು ಹೊರ ಬರುತ್ತವೆ ಎಂದರು. ನಾವೆಲ್ಲರೂ ಖಾವಿ ಬಟ್ಟೆಗೆ, ಸ್ವಾಮೀಜಿಗಳು ಮಾಡುವ ಕಾರ್ಯಕ್ಕೆ ಶರಣಾಗಿದ್ದೇವೆ. ನಾವು ಸ್ವಾಮೀಜಿಗಳ ಆಶೀರ್ವಾದ ಪಡೆಯಬೇಕು. ಆದರೆ, ಅಂತಹ ಸ್ವಾಮೀಜಿಗಳಿಗೆ ಆಶೀರ್ವಾದ ಮಾಡುವ ಪರಿಸ್ಥಿತಿ ಬಂದು ಬಿಟ್ಟಿದೆ. ನಮ್ಮ ಸೇವೆ ಮಾಡಿ, ನೀವು ಚೆನ್ನಾಗಿರುತ್ತೀರಾ ಎಂಬ ಧೋರಣೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಧೋರಣೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಬಂದಿದೆಯೆಂಬುದನ್ನು ತೋರಿಸುತ್ತದೆ. ರಾಜಕೀಯ ಅಧಿಕಾರ, ಅದರ ಸ್ವಭಾವ, ಪಿತ್ತ ನೆತ್ತಿಗೇರಿಸುತ್ತದೆ. ಪಿತ್ತ ನೆತ್ತಿಗೇರಿದಾಗ ಸಹಜವಾಗಿಯೇ ಇಂತಹ ಪದಗಳು ಬರುತ್ತವೆ ಎಂದು ತಿಳಿಸಿದರು.

ಸಿಎಂ ಡಿಕೆಶಿ ಸ್ಟಿಂಗ್ ಆಪರೇಷನ್‌ ಹೇಳಿಕೆ ಎರಡು ಅಲುಗಿನ ಕತ್ತಿ

ದಾವಣಗೆರೆ: ಸ್ಟಿಂಗ್ ಆಪರೇಷನ್ ಕುರಿತಂತೆ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿರುವುದು ತಮ್ಮ ಸಚಿವರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಕಳಿಸಿರುವ ಒಂದು ಸಂದೇಶವಾಗಿದ್ದು, ಮುಖ್ಯಮಂತ್ರಿ ಗಳಿಕೆಯಲ್ಲಿ ಎರಡು ಅಲುಗಿನ ಕತ್ತಿಯೂ ಇದೆ ಎಂದು ಸುರೇಶ ಕುಮಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸಂಪುಟ ಸದಸ್ಯರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಿಎಂ ಸ್ಟಿಂಗ್ ಆಪರೇಷನ್‌ ವಿಚಾರ ಪ್ರಸ್ತಾಪ ಮಾಡಿದ್ದು, ಈ ಮಾತುಗಳಲ್ಲಿ ಎರಡು ಅಲುಗಿನ ಕತ್ತಿ ಇದೆ ಎಂದರು. ಸಂಪುಟ ಸದಸ್ಯರಿಗೆ ಹುಷಾರಾಗಿರಿ ಅಂತಾ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಸಚಿವರು ಯಾರಿಂದ ಹುಷಾರಾಗಿರಬೇಕು? ಸ್ಟಿಂಗ್ ಆಪರೇಷನ್ ಯಾರು ಮಾಡಿಸುತ್ತಿದ್ದಾರೆ? ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇದು ಸಚಿವ ಸಂಪುಟದ ನಡವಳಿಕೆ ಕಲಾಪದ ಒಂದು ಭಾಗವಾಗಿ ಬಿಟ್ಟರೆ ಹೇಗೆ? ಇದೆಲ್ಲಾ ಒಳ್ಳೆಯ ಬೆಳವಣಿಗೆಯಲ್ಲ. ಈಗ ಬಹಳಷ್ಟು ಜನ ಮಾಡುತ್ತಿದ್ದಾರೆ. ಅಂತಹವರಿಗೆ ಮಾಡಿ, ಹುಷಾರಾಗಿ ಮಾಡಿ ಅಂದಂಗಿದೆ ಸಿಎಂ ಹೇಳಿಕೆ ಎಂದು ವ್ಯಂಗ್ಯವಾಡಿದರು.

ಎರಡನೇ ಮದುವೆ, ಎರಡನೇ ಮನೆ ಅಂತೆಲ್ಲಾ ಹೇಳಿಕೆಗಳನ್ನೂ ಸಿಎಂ ಆಡಿದ್ದಾರೆ. ಚುನಾವಣೆ ಗೆಲ್ಲಬೇಕಾದಾಗ ಇರುವ ಲಕ್ಷಣಗಳು ಬೇರೆ, ಚುನಾವಣೆ ಗೆದ್ದ ಮೇಲೆ ಇರಬೇಕಾದ ಲಕ್ಷಣಗಳೇ ಬೇರೆ. ಚುನಾವಣೆ ಗೆದ್ದು ಒಂದು ಸ್ಥಾನಕ್ಕೆ ಬಂದ ನಂತರ ಉದಾರತನ, ಸರ್ವವ್ಯಾಪಿ ಇರಬೇಕು. ಆ ಸ್ಥಾನಕ್ಕೆ ಬರುವ ತಂತ್ರವನ್ನು ಆಂತಹ ಸ್ಥಾನಕ್ಕೆ ಬಂದ ನಂತರವೂ ಬಳಸುತ್ತೇನೆನ್ನುವುದು ಒಳ್ಳೆಯ ಲಕ್ಷಣವಲ್ಲ ಎಂದು ಸಿಎಂ ಹೇಳಿಕೆಗೆ ಆಕ್ಷೇಪಿಸಿದರು.