ಮಾಲ್‌ ಫಲಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನಕ್ಕೆ ವಿಶ್ವ ಕರವೇ ದಾವಣಗೆರೆಯಲ್ಲಿ ಒತ್ತಾಯ

| Published : Mar 02 2025, 01:18 AM IST

ಸಾರಾಂಶ

ದಾವಣಗೆರೆಯಲ್ಲಿ ನೂತನವಾಗಿ ಆರಂಭವಾಗಿರುವ ಶಾಪಿಂಗ್‌ ಮಾಲ್‌ನಲ್ಲಿ ಕನ್ನಡವೇ ಮಾಯವಾಗಿದ್ದು, ಸರ್ಕಾರದ ಆದೇಶಕ್ಕೆ ಚೆನ್ನಯ್ ಶಾಪಿಂಗ್ ಮಾಲ್‌ ಕಿಮ್ಮತ್ತು ಕೊಟ್ಟಿಲ್ಲವೆಂದು ಕನ್ನಡ ಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು.

ವಿಶ್ವ ಕರವೇ ರಾಜ್ಯಾಧ್ಯಕ್ಷ ಯಲ್ಲಪ್ಪ ಮನವಿಗೆ ಸಂಸ್ಥೆ ಮಾಲೀಕರ ಸ್ಪಂದನೆ । ವಾರದಲ್ಲಿ ಕನ್ನಡ ಫಲಕ ಅಳವಡಿಕೆ: ಮರಿ ಜನಾರ್ದನರೆಡ್ಡಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ನೂತನವಾಗಿ ಆರಂಭವಾಗಿರುವ ಶಾಪಿಂಗ್‌ ಮಾಲ್‌ನಲ್ಲಿ ಕನ್ನಡವೇ ಮಾಯವಾಗಿದ್ದು, ಸರ್ಕಾರದ ಆದೇಶಕ್ಕೆ ಚೆನ್ನಯ್ ಶಾಪಿಂಗ್ ಮಾಲ್‌ ಕಿಮ್ಮತ್ತು ಕೊಟ್ಟಿಲ್ಲವೆಂದು ಕನ್ನಡ ಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು.

ನಗರದ ಅರುಣಾ ಚಿತ್ರ ಮಂದಿರ ಸಮೀಪದ ನೂತನ ಚೆನ್ನಯ್ ಶಾಪಿಂಗ್ ಮಾಲ್ ಬಳಿ ಸೇರಿದ ಕನ್ನಡ ಪರ ಸಂಘಟನೆಗಳ ಮುಖಂಡರು, ಹೊಸದಾಗಿ ಆರಂಭಿಸಿರುವ ಶಾಪಿಂಗ್ ಮಾಲ್‌ಮಲ್ಲಿ ಕನ್ನಡ ಕಡೆಗಣಿಸಿರುವುದು, ಹಳೆ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿ, ಮೆಟ್ಟಿಲು ಕಟ್ಟಿಕೊಂಡಿರುವ ಬಗ್ಗೆ ಬೇಸರ ಹೊರ ಹಾಕಿದರು.

ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ನಗರದ ಎಲ್ಲಾ ಫ್ಲೆಕ್ಸ್, ಹೋಲ್ಡಿಂಗ್ಸ್‌ ತೆರವು ಮಾಡಿಸಿರುವುದು ಸ್ವಾಗತಾರ್ಹ. ಆದರೆ, ಈ ಶಾಪಿಂಗ್ ಮಾಲ್‌ನ ಫ್ಲೆಕ್ಸ್‌ಗಳನ್ನು ಜಿಲ್ಲಾ ಕೇಂದ್ರಾದ್ಯಂತ ಅಳವಡಿಸಿರುವುದನ್ನು ನೋಡಿದರೆ ಅಧಿಕಾರಿಗಳ ಧನದಾಹದ ವಾಸನೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ನಿಯಮ ಪಾಲಿಸುವಂತೆ, ಕನ್ನಡಕ್ಕೆ ಆದ್ಯತೆ, ಮಹತ್ವ ನೀಡಬೇಕು. ಇನ್ನು ಎರಡು ದಿನದಲ್ಲೇ ಶಾಪಿಂಗ್ ಮಾಲ್‌ನ ಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಇರಬೇಕು. ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು. ಪಾಲಿಕೆ ಜಾಗದಲ್ಲಿ ಮೆಟ್ಟಿಲುಗಳನ್ನು ಕಟ್ಟಿದ್ದು, ಅದನ್ನು ತೆರವು ಮಾಡಿಸಬೇಕು. ವಾಹನ ನಿಲುಗಡೆಗೆ ಜಾಗವೇ ಇಲ್ಲ. ಫುಟ್‌ಪಾತ್ ಒತ್ತುವರಿ ವಿಚಾರ ಗೊತ್ತಾಗುತ್ತಿದ್ದಂತೆ ಪಾಲಿಕೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

ರಸ್ತೆ ಬದಿ ಫುಟ್‌ಪಾತ್‌ನಲ್ಲಿ ತಿಂಡಿ ಅಂಗಡಿ, ಸಣ್ಣಪುಟ್ಟ ಅಂಗಡಿ ಇಟ್ಟರೂ ಪಾಲಿಕೆ ಅಧಿಕಾರಿಗಳು ಬಂದು, ಪೌರುಷ ಮೆರೆದು, ತೆರವು ಮಾಡಿಸುತ್ತಾರೆ. ಇಲ್ಲಿ ಯಾಕೆ ಪಾಲಿಕೆ ಆಯುಕ್ತರಾದಿಯಾಗಿ ಅಧಿಕಾರಿಗಳಿಗೆ ಒತ್ತುವರಿ ಕಾಣುತ್ತಿಲ್ಲವೇ? ಪಾದಚಾರಿಗಳ ಸಂಚಾರಕ್ಕೆ, ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಸೆಲ್ಲರ್‌ನಲ್ಲಿ ಪಾರ್ಕಿಂಗ್ ಬಿಡದೇ, ಮುಂಭಾಗದ ಫುಟ್‌ಪಾತ್ ಒತ್ತುವರಿ ಮಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಸ್ಮಾರ್ಟ್‌ ಸಿಟಿ, ಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಚಾರ ಪೊಲೀಸರು ಫುಟ್‌ಪಾತ್ ಒತ್ತುವರಿಗೆ ಅವಕಾಶ ನೀಡಬಾರದು. ಸಂಸ್ಥೆಯವರು ಇನ್ನು ಮುಂದೆ ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಂಸ್ಥೆ ಮಾಲೀಕ ಮರಿ ಜನಾರ್ದನ ರೆಡ್ಡಿ ಮಾತನಾಡಿ, ಇನ್ನು 2 ದಿನದಲ್ಲೇ ಕನ್ನಡ ನಾಮಫಲಕ ಹಾಕುವುದಾಗಿ, ಒಂದು ವಾರದಲ್ಲೇ ಮೆಟ್ಟಿಲುಗಳನ್ನು ತೆಗೆಸುವುದಾಗಿ ಭರವಸೆ ನೀಡಿದರು.

ನಾವು ಇಲ್ಲಿ ಬಾಡಿಗೆ ಕಟ್ಟಡದಲ್ಲಿ ಶಾಪಿಂಗ್ ಮಾಲ್ ಆರಂಭಿಸುತ್ತಿದ್ದೇವೆ. ಇದರ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಕನ್ನಡ ಪರ ಸಂಘಟನೆಗಳು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಇದನ್ನು ಇನ್ನೊಂದು ವಾರದೊಳಗೆ ಸರಿಪಡಿಸುತ್ತೇವೆ ಎಂದರು.

ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬುರಾವ್‌, ಗಿರೀಶ, ರಮೇಶ, ರಂಗನಾಥ ಇತರರು ಇದ್ದರು.