ಸಾರಾಂಶ
- ಲ್ಯಾಟಿನ್ ಅಮೇರಿಕಾದ ವಿ.ವಿ.ಯಲ್ಲಿ 3 ವಾರ ಕಾಲ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆಗೆ ಆಹ್ವಾನ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ವೈಜ್ಞಾನಿಕ ಪ್ರಕಟಣೆಗಳ ಅವಲೋಕನ ಕುರಿತ ವಿಶೇಷ ಉಪನ್ಯಾಸ ನೀಡಲು ಹಾಗೂ ವೈಜ್ಞಾನಿಕ ಸಂಶೋಧನೆಗಳ ಒಡಂಬಡಿಕೆಗಾಗಿ ಲ್ಯಾಟಿನ್ ಅಮೇರಿಕಾ ಪ್ರಾಂತ್ಯದ ಚಿಲಿ ದೇಶದ ವಿಶ್ವವಿದ್ಯಾನಿಲಯ ಆಹ್ವಾನದ ಮೇರೆಗೆ ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಆ.16ರಂದು ಪ್ರವಾಸ ಕೈಗೊಳ್ಳಲಿದ್ದಾರೆ.
ಲ್ಯಾಟಿನ್ ಅಮೇರಿಕಾದ ಚಿಲಿ ದೇಶದ ತಾರಾಪಾಕ ವಿಶ್ವವಿದ್ಯಾನಿಲಯ ಹಾಗೂ ದಾವಣಗೆರೆ ವಿವಿಗಳ ವೈಜ್ಞಾನಿಕ ಸಂಶೋಧನೆಗಳ ಪ್ರಕಟಣೆಗಳ ಪರಾಮರ್ಶೆ ನಡೆಸುವ ಜೊತೆಗೆ ಪ್ರಕಟಣೆಗಳ ಕುರಿತಂತೆ ಉಪನ್ಯಾಸ ನೀಡಲು ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅವರಿಗೆ ಮೂರು ವಾರಗಳ ಕಾಲ ಸಂದರ್ಶನ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡಲು ಚಿಲಿ ದೇಶದ ವಿವಿ ಆಹ್ವಾನಿಸಿದೆ.ಗ್ರಂಥಾಲಯ ವಿಜ್ಞಾನದಲ್ಲಿ ಈಚಿನ ಬೆಳವಣಿಗೆ, ಪ್ರವೃತ್ತಿಗಳು ಹಾಗೂ ತಂತ್ರಜ್ಞಾನಗಳ ಬಳಕೆ ಕುರಿತು ಅಲ್ಲಿನ ವಿಜ್ಞಾನಿಗಳು, ವಿದ್ವಾಂಸರ ಜೊತೆ ಸಂವಾದವನ್ನು ಪ್ರೊ. ಬಿ.ಡಿ. ಕುಂಬಾರ್ ನಡೆಸಲಿದ್ದಾರೆ. ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದಂತೆ ಅಲ್ಲಿನ ವಿವಿ ತಜ್ಞರು, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಪ್ರೊ.ಕುಂಬಾರ ಜೊತೆ ಸಂಯೋಜಿತ ಸಂಶೋಧನೆ, ಪ್ರಕಟಣೆ, ಸಂಶೋಧನಾ ವಿನಿಮಯ, ವಿದ್ಯಾರ್ಥಿಗಳ ವಿನಿಮಯ ಅಧ್ಯಯನ ಹಾಗೂ ಇನ್ನಿತರ ವಿಷಯಗಳ ಕುರಿತು ಒಡಂಬಡಿಕೆಯ ಪ್ರಸ್ತಾವವನ್ನೂ ಚರ್ಚಿಸಲಾಗುವುದು ಎಂದು ತಾರಾಪಾಕಾ ವಿವಿ ನಿರ್ದೇಶಕ ಪ್ರೊ. ಎಮಿಲಿಯೊ ರೊಡ್ರಿಜ್ ರಾನ್ಸ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗುರುತಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ದಾವಿವಿ ಮತ್ತು ತಾರಾಪಾಕಾ ವಿವಿ ಈಗಾಗಲೇ 10ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದುವರಿದ ಭಾಗವಾಗಿ ಸಂಶೋಧನಾ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ದಾವಿವಿ 20ಕ್ಕೂ ಹೆಚ್ಚು ಪ್ರಾಧ್ಯಾಪಕರಿಗೆ ಬಹುಶಿಸ್ತೀಯ ಅಧ್ಯಯನ, ಸಾಮಾಜಿಕ ಕಳಕಳಿಯ ಸಂಶೋಧನೆಗೆ ಪೂರಕ ವಾತಾವರಣ ಒದಗಿಸಲು ಮತ್ತು ಸಂಶೋಧನಾ ಸಹಭಾಗಿತ್ವ ಹೊಂದಲು ಪ್ರಸ್ತುತ ತಮ್ಮ ಭೇಟಿಯ ಸಹಕಾರಿ ಆಗಲಿದೆ. ಹೆಚ್ಚಿನ ಸಂಶೋಧನೆಗೆ ಆದ್ಯತೆ ನೀಡುವ ಜೊತೆಗೆ, ದಾವಿವಿ ವಿದ್ಯಾರ್ಥಿಗಳು ಚಿಲಿಯಲ್ಲಿ ಸಂಶೋಧನಾ ಅಧ್ಯಯನ ಕೈಗೊಳ್ಳಲು ಮತ್ತು ತಾಂತ್ರಿಕ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ ಎಂದು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದ್ದಾರೆ.- - -
ಬಾಕ್ಸ್ * 15ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಪ್ರೊ.ಕುಂಬಾರ ಅವರ ಜೊತೆ ವಿವಿ ಕುಲ ಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ ಸಂಶೋಧನಾ ಒಡಂಬಡಿಕೆಗಾಗಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರೊ.ಮಹಾಬಲೇಶ್ವರ ಗಣಿತ ಶಾಸ್ತ್ರದಲ್ಲಿ ಹೊಸ ಮಾದರಿ ಸಂಶೋಧನಾ ವಿಧಾನ ಮತ್ತು ಪ್ರವೃತ್ತಿಗಳು ಹಾಗೂ ಗಣಿತಶಾಸ್ತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರೊ.ಮಹಾಬಲೇಶ್ವರ ಈಗಾಗಲೇ ತಾರಾಪಾಕಾ ವಿವಿ ವಿಜ್ಞಾನಿಗಳ ಜೊತೆಗೆ ಜಂಟಿಯಾಗಿ ಗಣಿತಶಾಸ್ತ್ರದಲ್ಲಿ 15ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದು, ಪ್ರಸ್ತುತ 8 ಸಂಶೋಧನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೊ.ಮಹಾಬಲೇಶ್ವರ ಮಾರ್ಗದರ್ಶನದಲ್ಲಿ ಚಿಲಿ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಮೂವರು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.- - - -12ಕೆಡಿವಿಜಿ1: ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ
-12ಕೆಡಿವಿಜಿ2: ದಾವಣಗೆರೆ ವಿವಿ ಕುಲ ಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ