ಲಂಬಾಣಿ ಸಮುದಾಯದ ದೊಡ್ಡ ಹಬ್ಬ ದವಾಳಿ!

| Published : Oct 30 2024, 12:45 AM IST

ಸಾರಾಂಶ

ತಾಂಡಾದ ನಾಯಕ, ಕಾರಭಾರಿ, ಡಾವ್‌ ಸಾಣ್‌ ಮತ್ತು ಗಣ್ಯವ್ಯಕ್ತಿಗಳ ಮನೆಗೆ ಭೇಟಿ ನೀಡಿ ಆರತಿ ಬೆಳಗಿಸಿ ಮನೆ ಮಂದಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಹಾರೈಸುತ್ತಾರೆ.

ರವೀಂದ್ರ ಚವ್ಹಾಣ

ಹುಬ್ಬಳ್ಳಿ:

ಬಂಜಾರ ಜನಾಂಗದ ಸಂಸ್ಕೃತಿಯಲ್ಲಿ ಅತಿದೊಡ್ಡ ಹಬ್ಬವೆಂದರೆ ದೀಪಾವಳಿ. ಇದನ್ನು ಲಂಬಾಣಿ ಭಾಷೆಯಲ್ಲಿ “ದವಾಳಿ” ಎಂದು ಕರೆಯುತ್ತಾರೆ. ಎಲ್ಲ ಸಮುದಾಯಕ್ಕೂ ಒಂದು ಬಗೆಯಾದರೆ ಲಂಬಾಣಿ ಜನಾಂಗಕ್ಕೆ ಮಾತ್ರ ದೀಪಾವಳಿ ಮತ್ತೊಂದು ಬಗೆಯ ವಿಶೇಷ.

ಒಂದು ತಿಂಗಳ ಹಿಂದೆಯೇ ತಾಂಡಾಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಹಬ್ಬದ ನಿಮಿತ್ತ ಹಿರಿಯ ಮಹಿಳೆಯರು ಮದುವೆಯಾಗದ ಯುವತಿಯರಿಗೆ ಹಾಗೂ ಚಿಕ್ಕ ಹೆಣ್ಣು ಮಕ್ಕಳಿಗೆ ಲಂಬಾಣಿಯ ನೃತ್ಯ ಹಾಗೂ ಲಂಬಾಣಿ ಹಾಡು ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಾರೆ. ಜತೆಗೆ ತಮ್ಮ ವಸ್ತ್ರವಿನ್ಯಾಸದ ಮಹತ್ವ ಪರಿಚಯಿಸಿ ಕೊಡುತ್ತಾರೆ. ತಿಂಗಳ ಕಾಲ ತಾಂಡಾಗಳಲ್ಲಿರುವ ಸೇವಾಲಾಲ್ ದೇವಾಲಯದ ಮುಂದೆ ನೃತ್ಯ ಹಾಗೂ ಹಾಡುಗಾರಿಕೆಯ ಅಭ್ಯಾಸ ನಡೆಯುತ್ತದೆ.

ದೀಪಾವಳಿ ಅಮಾವಾಸ್ಯೆ ದಿನದಂದು ರಾತ್ರಿ ಯುವತಿಯರು ವಿವಿಧ ಹೂವುಗಳಿಂದ ಲಕ್ಷ್ಮಿಪೂಜೆ ಸಲ್ಲಿಸಿದ ಆನಂತರ ವೇಷಭೂಷಗಳಿಂದ ಶೃಂಗರಿಸಿದ ಯುವತಿಯರು ಕೈಯಲ್ಲಿ ಹುಲ್ಲಿನಿಂದ ತಯಾರಿಸಿದ ಹಣತೆ ಹಿಡಿದು ಪ್ರತಿಯೊಂದು ಮನೆ-ಮನೆಗೆ ಭೇಟಿ ನೀಡಿ ಆಕಳು, ಎತ್ತುಗಳಿಗೆ ಆರತಿ ಬೆಳಗಿಸಿ ಪೂಜಿಸುತ್ತಾರೆ.

ತಾಂಡಾದ ನಾಯಕ, ಕಾರಭಾರಿ, ಡಾವ್‌ ಸಾಣ್‌ ಮತ್ತು ಗಣ್ಯವ್ಯಕ್ತಿಗಳ ಮನೆಗೆ ಭೇಟಿ ನೀಡಿ ಆರತಿ ಬೆಳಗಿಸಿ ಮನೆ ಮಂದಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಹಾರೈಸುತ್ತಾರೆ. ಲಂಬಾಣಿ ಭಾಷೆಯಲ್ಲಿ "ವರ್ಷಧಾರೆ ಕೋರ ದವಾಳಿ ತೋನ ಮೇರಾ ಲಕ್ಷಿ ತೋನ ಮೇರಾ ಗಾವಡಿ ತೋನ ಮೇರಾ " (ಎಲ್ಲರಿಗೂ ಸುಖ, ಶಾಂತಿ, ಸಂತೋಷ ತರಲಿ, ನೆಮ್ಮದಿ ಸಿಗಲಿ) ಜನಪದ ಹಾಡನ್ನು ಹಾಡಿದ ನಂತರ ಮನೆಯವರು ನೀಡುವ ಅಲ್ಪಕಾಣಿಕೆ ಸ್ವೀಕರಿಸುವುದು ಸಂಪ್ರದಾಯವಾಗಿದೆ.

ಕಾಳಿ ಮಾಸ್:

ದೀಪಾವಳಿಯ ಮೊದಲನೆಯ ದಿನವಾದ ಅಮಾವಾಸ್ಯೆಯಂದು "ಕಾಳಿ ಮಾಸ್ " ಎಂದು ಕರೆಯುವುದರಿಂದ ಮರಿಯಮ್ಮ ದೇವಿಯ ಅವತಾರಗಳಲ್ಲಿ ಒಂದಾದ ಕಾಳಿ ದೇವಿಗೆ ಬಲಿ ಕೊಡುವುದು ಪಾರಂಪರಿಕ ರೂಢಿ. ಕಾಳಿ ದೇವಿಗೆ ಹಾಗೂ ಲಂಬಾಣಿ ಸಮುದಾಯವನ್ನು ರಕ್ಷಿಸುತ್ತಿರುವ ಅನೇಕ ದೈವಗಳಿಗೂ ಬಲಿ ಅರ್ಪಿಸುವುದು ವಾಡಿಕೆ.

ಮೇರಾ ಸಂಭ್ರಮ:

ತಾಂಡಾದ "ನಾಯಕ್ " ಮನೆಗೆ ಹೋಗಿ ದೀಪಗಳನ್ನು ಹಿಡಿದು ಹಾಡುತ್ತಾ "ನಾಯಕ್ " ಅವರ ಅಪ್ಪಣೆ ಪಡೆದು ನಂತರ ಬೇರೆ ಮನೆಗಳಿಗೆ ಹೋಗುತ್ತಾರೆ. ಬಂಜಾರ ಸಮುದಾಯ ಕನ್ಯಯರನ್ನು ತಮ್ಮ ಮನೆಯ ಬೆಳದಿಂಗಳು ಎಂದು ಪರಿಗಣಿಸುತ್ತಾರೆ. ಯುವತಿಯರು ಹಾಡು ಹೇಳುತ್ತಾ ಹೋಗುವಾಗ ಮನೆಯ ಹಿರಿಯರು ಅವರನ್ನು ಸ್ವಾಗತಿಸುತ್ತಾರೆ. ಲಂಬಾಣಿ ಭಾಷೆಯಲ್ಲಿ ಇದನ್ನು “ಮೇರಾ” ಎಂದು ಕರೆಯುತ್ತಾರೆ. ನ. 1ರಂದು ಸಂಜೆ ಬಂಜಾರಾ ಕಾಲನಿಗಳಲ್ಲಿ ಈ ಮೇರಾ ಕಾರ್ಯಕ್ರಮ ನಡೆಯುವುದು.

ಧಬುಕಾರ್ ಕಾರ್ಯಕ್ರಮ:

ದೀಪಾವಳಿಯ 2ನೇ ದಿನವನ್ನು ಹಿರಿಯರ ಹಬ್ಬ ಎಂದೇ ಕರೆಯಲಾಗುತ್ತದೆ. ಅಗಲಿದ ಹಿರಿಯರನ್ನು ಅಂದರೆ ಮೃತರಾದ ಹತ್ತಾರು ತಲೆಮಾರಿನವರನ್ನು ಸ್ಮರಿಸಿ ಆಶೀರ್ವಾದ ಪಡೆಯುತ್ತಾರೆ. ಅವರು ಇಷ್ಟಪಡುತ್ತಿದ್ದ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಲಂಬಾಣಿ ಭಾಷೆಯಲ್ಲಿ “ಧಬುಕಾರ್” ಎಂದು ಕರೆಯುತ್ತಾರೆ. ನ. 2ರಂದು ಬೆಳಗ್ಗೆ ಎಲ್ಲ ಬಂಜಾರಾ ಕಾಲನಿಗಳಲ್ಲಿ ಈ ಧಬುಕಾರ್ ನಡೆಯುವುದು.

ಬಲಿಪಾಡ್ಯ ದಿನದಂದು ತಾಂಡಾದ ಯುವತಿಯರು ಬಣ್ಣಬಣ್ಣದ ಹೂವುಗಳನ್ನು ಬಿದಿರಿನ ಬುಟ್ಟಿಯಲ್ಲಿ ತಂದು ಸಂತ ಸೇವಾಲಾಲ್‌ ಮತ್ತು ಜಗದಂಬಾ ದೇವಾಲಯ, ಮರಿಯಮ್ಮದೇವಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ಅರ್ಪಿಸುತ್ತಾರೆ. ಬಂಜಾರ್‌ ಸಮುದಾಯ ಇಂದಿಗೂ "ದವಾಳಿ " ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದರೊಂದಿಗೆ ಈ ಪರಂಪರೆ ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಲಾಗುತ್ತದೆ ಎಂದು ಸಮಾಜದ ಹಿರಿಯ ಪಾಂಡುರಂಗ ಪಮ್ಮಾರ ಹೇಳಿದರು.