ನಾಡಿದ್ದು ಬೆಳಗಾವಿಗೆ ರಾಜ್ಯ ರೈತ ಸಂಘ ಮುತ್ತಿಗೆ

| Published : Dec 02 2023, 12:45 AM IST

ಸಾರಾಂಶ

ಬರ ಪರಿಹಾರ, ಎಂಎಸ್‌ಪಿ ಜಾರಿ, ಕಬ್ಬಿಗೆ ಸೂಕ್ತ ದರ, ವಿದ್ಯುತ್ ಕಾಯ್ದೆ ಕೈ ಬಿಡಲು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ

ಬರ ಪರಿಹಾರ, ಎಂಎಸ್‌ಪಿ ಜಾರಿ, ಕಬ್ಬಿಗೆ ಸೂಕ್ತ ದರ, ವಿದ್ಯುತ್ ಕಾಯ್ದೆ ಕೈ ಬಿಡಲು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು, ಮಾರಕ ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ ಹಿಂಪಡೆಯುವುದೂ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಡಿ.4ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 4ಕ್ಕೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರಾಜ್ಯಾದ್ಯಂತ ವಿವಿಧೆಡೆಯಿಂದ ಆಗಮಿಸಲಿರುವ ರೈತರು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ ಎಂದರು.

ಬೆಳೆ ವಿಮೆ ಕೊಡಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮ ನೀಡಿಲ್ಲ. ಬೆಲೆ ರಕ್ಷಣೆ ಯೋಜನೆಗಳೂ ಇಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣೆಯೇ ಕಾಂಗ್ರೆಸ್‌ ಗೆ ಮುಖ್ಯವಾಗಿದೆ. 2020ರ ಕೃಷಿ ಕಾಯ್ದೆಗಳನ್ನು ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿತ್ತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಈ ಕಾಯ್ದೆ ವಿರೋಧಿಸಿ, ರೈತರೊಂದಿಗೆ ನಿಂತು ಹೋರಾಟಕ್ಕೆ ಬೆಂಬಲಿಸಿ ಮಾರಕ ಕೃಷಿ ಕಾಯ್ದೆ ರದ್ದಾಗಬೇಕು. ಈ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗಲಿದೆಯೆಂದಿತ್ತು. ಈಗ ಅದೇ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ರೈತರಿಗೆ ನೆರವಾಗುವ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಡಿ.4ರಿಂದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಈ ಅ‍ಧಿವೇಶನದಲ್ಲೇ ಕೃಷಿ ಕಾಯ್ದೆ, ಸೆ.22ರ ವಿದ್ಯುತ್ ಕಾಯ್ದೆ ಹಿಂಪಡೆಯಬೇಕು. ಎಂಎಸ್‌ಪಿ ಶಾಸನಬದ್ಧ ಕಾಯ್ದೆ ಜಾರಿಗೊಳ್ಳಬೇಕು. ಕಬ್ಬಿಗೆ ಎಫ್‌ಆರ್‌ಪಿ ಜೊತೆಗೆ ಎಸ್‌ಎಪಿ ನೀಡಬೇಕು. ರಾಜ್ಯದ ಕಬ್ಬು ಇಳುವರಿಗೆ ಒಂದೊಂದು ಕಾರ್ಖಾನೆಯಲ್ಲೂ ಒಂದೊಂದು ಧಾರಣೆ ನಿಲ್ಲಬೇಕು. ಕಬ್ಬಿನ ಸರಾಸರಿ ಇಳುವರಿ 10 ಇದಕ್ಕಿಂತ ಕಡಿಮೆ ಇಳುವರಿ ಕಾರ್ಖಾನೆಗಳ ಪರವಾನಗಿ ರದ್ದು ಪಡಿಸಲಿ. ರಾಜ್ಯಾದ್ಯಂತ ಬರ ಆವರಿಸಿದ ಹಿನ್ನೆಲೆಯಲ್ಲಿ ತುರ್ತು ಬರ ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಮಹದಾಯಿ, ಮೇಕೆದಾಟು ಕಾರ್ಯವನ್ನು ಶೀಘ್ರವೇ ಕೈಗೊಳ್ಳಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮದಡಿ ನೀಡುತ್ತಿದ್ದ ಟ್ರಾನ್ಸಫಾರ್ಮರ್‌, ಕಂಬ, ವೈಯರ್‌ ಇತರೆ ಉಪಕರಣಗಳ ಸರ್ಕಾರವೇ ನೀಡಬೇಕು. ಚುನಾವಣೆ ಪೂರ್ವದಲ್ಲಿ ರೈತರ ಪರ ಧ್ವನಿ ಎತ್ತಿದ್ದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಈಗ ಅಧಿಕಾರಕ್ಕೆ ಬಂದ ನಂತರ ಅದೇ ರೈತರ ಕಡೆಗಣಿಸುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.

ರೈತ ಮುಖಂಡರಾದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ ನಾಯ್ಕ, ಶತಕೋಟಿ ಬಸಪ್ಪ, ಕಾಳೇಶ ಯಲೋದಹಳ್ಳಿ, ಬಸವರಾಜ ದಾಗಿನಕಟ್ಟೆ, ವಿಶ್ವನಾಥ ಮಂಟೂರು ಇತರರಿದ್ದರು. ಕಾಂಗ್ರೆಸ್‌ ಸರ್ಕಾರ ರೈತರ ಕಡೆಗಣಿಸಿದೆ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕೊಟ್ಟ ಮಾತಿನಂತೆ ನಡೆಯದಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರವು ರೈತರನ್ನು ಸಂಪೂರ್ಣ ಕಡೆಗಣಿಸಿದೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಅನಾವೃಷ್ಟಿಯಿಂದಾಗಿ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಅಸಡ್ಡೆ ತೋರುತ್ತಿದೆ.

ಕೋಡಿಹಳ್ಳಿ ಚಂದ್ರಶೇಖರ, ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ

.............