ಒಳಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಅಹೋರಾತ್ರಿ ಧರಣಿ ಪ್ರಾರಂಭ

| Published : Oct 07 2025, 01:03 AM IST

ಒಳಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಅಹೋರಾತ್ರಿ ಧರಣಿ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ಏಕಸದಸ್ಯ ಆಯೋಗದ ವರದಿ ಸುಪ್ರೀಂ ಕೋರ್ಟ್ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದರು.

ಗದಗ: ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ನಗಾರಿ ಬಾರಿಸುವುದರ ಮೂಲಕ ಬೃಹತ್ ಪ್ರತಿಭಟನೆ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು.ನಗರದ ಗಂಧಿ ವೃತ್ತದಿಂದ ಪ್ರಾರಂಭವಾದ ಬೃಹತ್ ಪಾದಯಾತ್ರೆ ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಟಾಂಗಾಕೂಟ, ಬಸವೇಶ್ವರ ಸರ್ಕಲ್, ಚೆನ್ನಮ್ಮ ವೃತ್ತ, ಮುಳಗುಂದ ನಾಕಾದಲ್ಲಿ ಒಳಮೀಸಲಾತಿ ಆದೇಶ ಪ್ರತಿಯನ್ನು ಬಂಜಾರ ಮಹಿಳೆಯರು ಸುಟ್ಟು ಹಾಕುವುದರ ಮೂಲಕ ಮಾರಕ ಅವೈಜ್ಞಾನಿಕ ಒಳಮೀಸಲಾತಿಯನ್ನು ರದ್ದುಪಡಿಸಿ ಬಂಜಾರ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ನಡೆದ ಪಾದಯಾತ್ರೆಯು ಟಿಪ್ಪು ಸುಲ್ತಾನ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಹೋರಾತ್ರಿ ಧರಣಿ ಪ್ರಾರಂಭವಾಯಿತು.ಈ ವೇಳೆ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ಏಕಸದಸ್ಯ ಆಯೋಗದ ವರದಿ ಸುಪ್ರೀಂ ಕೋರ್ಟ್ ಮಾನದಂಡಗಳನ್ನು ಉಲ್ಲಂಘಿಸಿದೆ. ಇದು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮುಂದುವರಿದ ಭಾಗದಂತಿದೆ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ- ಅಂಶಗಳು ವಾಸ್ತವಿಕತೆಗೆ ದೂರವಾಗಿವೆ. ಕೆಲವು ಕುಟುಂಬಗಳು ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ ಎಂದು ಆಯೋಗವೇ ಒಪ್ಪಿಕೊಂಡಿದ್ದರೂ ಸರ್ಕಾರ ಈ ಅಪೂರ್ಣ ವರದಿಯನ್ನೇ ಜಾರಿಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, 2011ರ ಜನಗಣತಿಯ ಅಂಕಿ- ಅಂಶಗಳನ್ನು 2025ರೊಂದಿಗೆ ಹೋಲಿಸಿದಾಗ, ಕೆಲ ಜಾತಿಗಳ ಜನಸಂಖ್ಯೆ ಕೇವಲ ಶೇ. 1.13ರಷ್ಟು ಹೆಚ್ಚಳ ತೋರಿಸಲಾಗಿದೆ. ಇನ್ನು ಕೆಲ ಜಾತಿಗಳಿಗೆ ಶೇ. 10ರಿಂದ 12ರಷ್ಟು ಹೆಚ್ಚಳ ತೋರಿಸಿರುವುದರ ಹಿಂದಿನ ಮರ್ಮವನ್ನು ನಾಗಮೋಹನದಾಸ ಅವರು ಬಹಿರಂಗಪಡಿಸಬೇಕಿದೆ. ಅಲ್ಲದೇ ಕೆಲವು ಸಮುದಾಯಗಳನ್ನು ಒಲೈಕೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡಿದೆ. ಅವೈಜ್ಞಾನಿಕವಾದ ಒಳಮೀಸಲಾತಿಯನ್ನು ಕೂಡಲೇ ಬೀಡಬೇಕು. ಈ ಹಿಂದೆ ಹೋರಾಟ ನಡೆದಾಗ ಜಿಲ್ಲಾ ಉಸ್ತುವಾರಿ ಸಚಿವರು ಮಾತು ನೀಡಿದ್ದರು. ಆ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಂಜಾರ ಸಮುದಾಯದ ಮುಖಂಡ ಉಮೇಶ ರಾಠೋಡ ಮಾತನಾಡಿದರು. ಈ ವೇಳೆ ಕೆಲ ಹೊತ್ತು ಹೋರಾಟಗಾರರು ರಸ್ತೆ ತಡೆದು ನಡೆಸಿದ ಹಿನ್ನೆಲೆ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಯಿತು. ಹೋರಾಟಗಾರರು ಸರ್ಕಾರದ ಪ್ರತಿಮೆಯನ್ನು ಹೊತ್ತು ಶವಸಂಸ್ಕಾರ ಮಾಡಿ ಪ್ರತಿಮೆ ಸುಡಲು ಹೋದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ಮುಖಂಡರಾದ ಚಂದ್ರಕಾಂತ ಚವಾಣ, ಭೀಮಸಿಂಗ್ ರಾಠೋಡ, ಐ.ಎಸ್. ಪೂಜಾರ, ಟಿ.ಎಲ್. ನಾಯಕ, ಚಂದು ನಾಯಕ, ಶಿವಪ್ಪ ನಾಯಕ, ಕೇಶಪ್ಪ ಕಾರಭಾರಿ, ಕುಬೇರಪ್ಪ ನಾಯಕ, ಖೀಮಪ್ಪ ನಾಯಕ, ತೇಜು ನಾಯಕ, ಶಿವಪತ್ರ ನಾಯಕ, ಕುಬೇರಪ್ಪ ರಾಠೋಡ, ಶಿವಣ್ಣ ಲಮಾಣಿ, ಮಹೇಶ ಲಮಾಣಿ, ಪರಮೇಶ ಲಮಾಣಿ ಸೇರಿದಂತೆ ಇತರರು ಇದ್ದರು.

17ರ ವರೆಗೆ ಅಹೋರಾತ್ರಿ ಧರಣಿ

ಸೋಮವಾರದಿಂದ ಅ. 17ರ ವರೆಗೆ ಪ್ರತಿನಿತ್ಯ 5 ತಾಲೂಕುಗಳ 5 ಗ್ರಾಮಗಳ ಜನರು ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. ಬಂಜಾರ ಸಮುದಾಯದ ಕಸುಬು ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವುದರ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರತಿಭಟನಾಕಾರರು ತೀರ್ಮಾನಿದ್ದಾರೆ.

ಅ. 17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಂಜಾರ ಸಮುದಾಯದವರ ಜತೆಗೆ ಮೀಸಲಾತಿಯಿಂದ ವಂಚಿತಗೊಂಡ ಇತರೆ ಸಮುದಾಯಗಳು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳಲಿವೆ.