ಕನ್ನಡಪ್ರಭ ವಾರ್ತೆ ಬೆಳಗಾವಿಹಗಲು ಹೊತ್ತಿನಲ್ಲಿ ಸ್ಕೂಟಿಯಲ್ಲಿ ಸಂಚರಿಸಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹26,53,400 ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿ ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಗಲು ಹೊತ್ತಿನಲ್ಲಿ ಸ್ಕೂಟಿಯಲ್ಲಿ ಸಂಚರಿಸಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹26,53,400 ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿ ವಶಪಡಿಸಿಕೊಂಡಿದ್ದಾರೆ.ಹುಂಚ್ಯಾನಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ನಗರ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರ ಮನೆಯಲ್ಲಿ ಅ.2ರಂದು ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಗಣೇಶಪುರದ ಕ್ರಾಂತಿ ನಗರದ ನಿವಾಸಿ ರೋಹನ ರೂಪೇಶ ಪಾಟೀಲ (30) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಚ್ಚೆ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹಗಲು ವೇಳೆಯಲ್ಲಿ ಸ್ಕೂಟಿಯಲ್ಲಿ ಸಂಚರಿಸಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಆತನಿಂದ ₹23,88,400 ಮೌಲ್ಯದ 161 ಗ್ರಾಂ ಚಿನ್ನಾಭರಣ, ₹ 2,30,000 ಮೌಲ್ಯದ ಒಂದು ಕೆ.ಜಿ. ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ₹ 35 ಸಾವಿರ ಮೌಲ್ಯದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ಉಳಿ, ಕಟರ್, ಸ್ಕ್ರೂಡ್ರೈವರ್ ಹಾಗೂ ಪಾನಾಗಳನ್ನೂ ಜಪ್ತಿ ಮಾಡಲಾಗಿದೆ.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ನಾಗನಗೌಡ ಕಟ್ಟಿಮನಿಗೌಡ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಸಂತೋಷ ದಳವಾಯಿ, ಲಕ್ಷ್ಮಪ್ಪ ಜೋಡಟ್ಟಿ, ವೈ.ಡಿ.ಸರನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಶಿದ ಮತ್ತು ದೀಪಕ ದೊಡ್ಡಗೋಣಿ ಸಹಕರಿಸಿದ್ದರು. ಆರೋಪಿಯನ್ನು ಬಂಧಿಸಿ ಕಳವು ಮಾಲು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಪೊಲೀಸ್ ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.