ಸಾರಾಂಶ
ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸೌಮ್ಯ ಸ್ವಭಾವ, ನಿಷ್ಕಲ್ಮಶ ಮನಸ್ಸಿನ ರಾಜಕೀಯ ಕ್ಷೇತ್ರದ ಧೃವತಾರೆ ಡಿ.ಬಿ. ಚಂದ್ರೇಗೌಡ ಇನ್ನಿಲ್ಲ. ಡಿಬಿಸಿ ಅಗಲಿಕೆ ಅವರ ನಿಕಟವರ್ತಿಗಳು, ತುಂಬಾ ಹತ್ತಿರದಿಂದ ಬಲ್ಲವರು, ರಾಜಕೀಯ ಕ್ಷೇತ್ರದ ಒಡನಾಡಿಗಳಿಗೆ ಅತೀವ ಬೇಸರ ಉಂಟುಮಾಡಿದೆ.
ಅಸೂಯೆ, ದ್ವೇಷ, ಮತ್ಸರದ ಗುಣಗಳು, ಚಂದ್ರೇಗೌಡರ ಮುಗ್ಧ ಸ್ವಭಾವ ನೋಡಿ ಹತ್ತಿರಕ್ಕೂ ಸುಳಿಯಲಿಲ್ಲ. ರಾಜಕೀಯದಲ್ಲಿ ಯಾರ ಕಾಲು ಎಳೆಯಲಿಲ್ಲ, ಯಾರನ್ನೂ ತುಳಿಯಲಿಲ್ಲ. ಈ ಒಳ್ಳೆತನ ಅವರನ್ನು ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್, ವಿಧಾನ ಸಭಾಧ್ಯಕ್ಷರ ಸ್ಥಾನಕ್ಕೆ ತಲುಪುವಂತೆ ಮಾಡಿದವು. ಹೀಗೆ ಅವರು ರಾಜಕೀಯದಲ್ಲಿ ಪಾಂಡಿತ್ಯವನ್ನೇ ಪಡೆದರು.1936 ರ ಆಗಸ್ಟ್ 26 ರಂದು ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಹುಟ್ಟಿದ ಚಂದ್ರೇಗೌಡ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎಸ್ಸಿ ಓದುವಾಗಲೇ ಅವರಲ್ಲಿನ ನಾಯಕತ್ವದ ಗುಣ ಗುರುತಿಸಿದ ವಿದ್ಯಾರ್ಥಿಗಳು ಅವರನ್ನು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಬೆಳಗಾವಿಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಓದುವಾಗ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1966 ರ ಮೇ 22 ರಂದು ವಿವಾಹವಾದರು. 1967ರಲ್ಲಿ ಪ್ರಜಾ ಸೋಷಿಯಲ್ ಪಾರ್ಟಿಯಲ್ಲಿ ಮೊದಲ ಬಾರಿಗೆ ಗುರುತಿಸಿಕೊಂಡು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದರು.1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಗಳಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು.
1977ರಲ್ಲಿ ಮತ್ತೆ ಎರಡನೇ ಬಾರಿಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆದರೆ, ಆ ವರ್ಷದ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಜಯಗಳಿಸಿದ್ದರೂ ಸಹ ಅಲಹಾಬಾದ್ ನ್ಯಾಯಾಲಯ ಇಂದಿರಾಗಾಂಧಿ ಆಯ್ಕೆಯನ್ನು ರದ್ದು ಮಾಡಿದ್ದರಿಂದ ಸದಸ್ಯತ್ವ ಕಳೆದುಕೊಂಡಿದ್ದರು. ಹಾಗಾಗಿ ಚಂದ್ರೇಗೌಡ ಅವರು 1978ರಲ್ಲಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾಗಾಂಧಿಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ತ್ಯಾಗಮಯಿ ಎನಿಸಿಕೊಂಡರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು, ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ. ಗೆದ್ದ ಮೇಲೆ ಅದನ್ನು ಯಾವುದೋ ರೂಪದಲ್ಲಿ ಮರಳಿ ಪಡೆಯಬಹುದೆಂದು ಅಡ್ಡ ದಾರಿಯ ರಾಜಕಾರಣ ಮಾಡಿದವರಲ್ಲ.ಡಿಬಿಸಿ ಹಾಗಿದ್ದೂ ರಾಜಕೀಯ ಜೀವನದಲ್ಲಿ ಹಲವು ಏಳು - ಬೀಳುಗಳನ್ನು ಕಂಡಿದ್ದಾರೆ. ಹಾಗೆ ನೋಡಿದರೆ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಒದಗಿ ಬಂದಿವೆ.ನಂತರದಲ್ಲಿ ನಡೆದ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆಗಳಿಂದಾಗಿ 1978ರಲ್ಲಿ ಚಂದ್ರೇಗೌಡ ಅವರು ದೇವರಾಜ್ ಅರಸ್ ಅವರೊಂದಿಗೆ ಕರ್ನಾಟಕ ಕ್ರಾಂತಿ ರಂಗ ಪಕ್ಷದಲ್ಲಿ ಗುರುತಿಸಿಕೊಳ್ಳುವ ಮೂಲಕ ಅದೇ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿ ಅಲ್ಲೆ ಪ್ರತಿಪಕ್ಷದ ನಾಯಕರಾದರು. 1983 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಜನತಾಪಾರ್ಟಿಯಿಂದ ಸ್ಪರ್ಧಿಸಿ ಜಯಗಳಿಸಿ, ವಿಧಾನ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1983 ರಲ್ಲಿ ಜನತಾಪಾರ್ಟಿ, ಜನತಾದಳವಾದ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದರು. 1989ರಲ್ಲಿ ಮರಳಿ ತೀರ್ಥಹಳ್ಳಿ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿದರು.
1999 ರಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಪರಾಭವಗೊಂಡರು. 2008ರ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಕೊನೆ ಹಂತದಲ್ಲಿ ಟಿಕೇಟ್ ಘೋಷಣೆ ಮಾಡಿತ್ತು. ಆಗಲೂ ಅವರು ಸೋತರು.ಅದೇ ವರ್ಷದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ 2009ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜಯಗಳಿಸಿದರು. ಅಲ್ಲಿ ಅವರು ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸಮಿತಿ ಸದಸ್ಯರಾಗಿದ್ದರು.
ಸಮಾಜವಾದಿ ಚಿಂತಕರಾಗಿದ್ದ ಡಿ.ಬಿ.ಚಂದ್ರೇಗೌಡರು 47 ವರ್ಷಗಳ ಕಾಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ವೈವಿದ್ಯಮಯವಾಗಿ ತೊಡಗಿಸಿಕೊಂಡಿದ್ದರು. 2014 ರ ನಂತರ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದು, ದಾರದಹಳ್ಳಿಯ ತಮ್ಮ ಪೂರ್ಣಚಂದ್ರ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.