ಇಂದು ಡಿ.ಬಿ.ಚಂದ್ರೇಗೌಡ ಅಂತ್ಯ ಸಂಸ್ಕಾರ

| Published : Nov 08 2023, 01:00 AM IST

ಸಾರಾಂಶ

ಇಂದು ಡಿ.ಬಿ.ಚಂದ್ರೇಗೌಡ ಅಂತ್ಯ ಸಂಸ್ಕಾರ

ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ ವಿಧಿವಿಧಾನ

ಕನ್ನಡಪ್ರಭ ವಾರ್ತೆ, ಮೂಡಿಗೆರೆ: ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ (87) ಅವರು ಮಂಗಳವಾರ ಮುಂಜಾನೆ 12.30 ಗಂಟೆಗೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಾಲೂಕಿನಾದ್ಯಂತ ಡಿಬಿಸಿ ಬಂಧು ಮಿತ್ರರು, ಎಲ್ಲಾ ಪಕ್ಷ, ವಿವಿಧ ಸಂಘಟನೆ ಮುಖಂಡರು ಡಿಬಿಸಿ ಅವರ ಮನೆ ಮುಂದೆ ಜಮಾಯಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ಮಾಜಿ ಸಚಿವೆ ಮೋಟಮ್ಮ, ಶಾಸಕಿ ನಯನಾ ಮೋಟಮ್ಮ, ಸಕಲೇಶಪುರದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಡಿಬಿಸಿ ಅವರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಧ್ಯಾಹ 2ರಿಂದ ಸಂಜೆ 6ಗಂಟೆವರೆಗೆ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಡಿಬಿಸಿ ಅವರ ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಬಿಜೆಪಿಯ ಬಾವುಟವನ್ನು ಶವ ಪೆಟ್ಟಿಗೆ ಮೇಲೆ ಹಾಕುವ ಮೂಲಕ ಡಿಬಿಸಿ ಅವರಿಗೆ ನಮನ ಸಲ್ಲಿಸಿದರು. ನಂತರ ಆಗಮಿಸಿದ ಮಾಜಿ ಸಭಾಪತಿ ರಮೇಶ್‌ಕುಮಾರ್ ಕೆಲ ಹೊತ್ತು ಡಿಬಿಸಿ ಅವರ ಪ್ರಾರ್ಥಿವ ಶರೀರ ವೀಕ್ಷಿಸುತ್ತಾ ಕಣ್ಣೀರಿಟ್ಟರು. ಉಳಿದಂತೆ ಕೇಂದ್ರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಡಿ.ಕೆ.ತಾರಾದೇವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಚಂದ್ರು, ಮಾಜಿ ಸಂಸದ ಜಯಪ್ರಕಾಶ್‌ಹೆಗಡೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರು ಡಿಬಿಸಿ ಅವರ ಅಂತಿಮ ದರ್ಶನ ಪಡೆದರು.

ಡಿಬಿಸಿ ಅವರ ಪತ್ನಿ ಪೂರ್ಣಿಮಾ, ನಾಲ್ವರ ಪುತ್ರಿಯರ ಪೈಕಿ ಮೂವರು ಪುತ್ರಿಯರಾದ ಪಲ್ಲವಿ, ವೀಣಾ, ಶೃತಿ ಹಾಗೂ ಬಂಧು ಮಿತ್ರರು ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದು, ಇನ್ನೋರ್ವ ಪುತ್ರಿ ಸಂಗೀತ ಅಮೇರಿಕಾದಿಂದ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಬಿಸಿ ಅಂತ್ಯ ಸಂಸ್ಕಾರವನ್ನು ಬುಧವಾರ ಮಧ್ಯಾಹ್ನ 12ಗಂಟೆಗೆ ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ನೆರವೇರಲಿದೆ. ಫೋಟೊ

7ಎಂಡಿಜಿ1ಎ ;

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಿಬಿಸಿ ಅವರ ಪಾರ್ಥಿವ ಶರೀರ ಇರಿಸಲಾಗಿದ್ದ ಶವಪೆಟ್ಟಿಗೆ ಮೇಲೆ ಬಿಜೆಪಿ ಬಾವುಟ ಹಾಕುವ ಮೂಲಕ ಡಿಬಿಸಿ ಅವರ ಅಂತಿಮ ದರ್ಶನ ಪಡೆದರು. 7ಎಂಡಿಜಿ1ಬಿ;

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಇರಿಸಲಾಗಿದ್ದ ಡಿಬಿಸಿ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಚಂದ್ರು ಅಂತಿಮ ನಮನ ಸಲ್ಲಿಸಿದರು. 7ಎಂಡಿಜಿ1ಸಿ;

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಇರಿಸಲಾಗಿದ್ದ ಡಿಬಿಸಿ ಅವರ ಪಾರ್ಥಿವ ಶರೀರಕ್ಕೆ ಮಾಜಿ ಸಭಾಪತಿ ರಮೇಶ್‌ಕುಮಾರ್ ಅಂತಿಮ ನಮನ ಸಲ್ಲಿಸುವ ವೇಳೆ ಕಣ್ಣೀರಿಟ್ಟರು.