ಲೋಕಸಭಾ ಮತ ಎಣಿಕೆಗೆ ಅಗತ್ಯ ಪೂರ್ವ ಸಿದ್ಧತೆಗೆ ಡಿಸಿ ಡಾ. ವಿದ್ಯಾಕುಮಾರಿ ಸೂಚನೆ

| Published : May 29 2024, 12:58 AM IST

ಲೋಕಸಭಾ ಮತ ಎಣಿಕೆಗೆ ಅಗತ್ಯ ಪೂರ್ವ ಸಿದ್ಧತೆಗೆ ಡಿಸಿ ಡಾ. ವಿದ್ಯಾಕುಮಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ - 2024ಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯದ ಪೂರ್ವ ತಯಾರಿಯ ಕುರಿತ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ಸುಲಲಿತವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸಲು ಅಗತ್ಯ ಇರುವ ಎಲ್ಲ ರೀತಿಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ - 2024ಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯದ ಪೂರ್ವ ತಯಾರಿಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯಲ್ಲಿ ಜೂನ್ 4 ರಂದು ಮತ ಎಣಿಕೆ ಕಾರ್ಯವು ನಡೆಯಲಿದ್ದು, ಚುನಾವಣಾ ಆಯೋಗವು ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದೆ ಮತ ಎಣಿಕೆ ಕಾರ್ಯವನ್ನು ನಡೆಸಬೇಕೆಂದು ತಿಳಿಸಿದರು.

ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಿಗದಿಪಡಿಸಿರುವ ಕಾಲಾವಧಿಯಲ್ಲಿ ಉಪಸ್ಥಿತರಿರಬೇಕು. ಅಂದು ಮುಂಜಾನೆ 5 ಗಂಟೆಗೆ ಮತ ಎಣಿಕಾ ಸಿಬ್ಬಂದಿ ಯಾವ ಕೊಠಡಿಯ ಟೇಬಲ್‌ನಲ್ಲಿ ಕಾರ್ಯನಿರ್ವಹಿಸಬೇಕೆಂದು ಸಿಬ್ಬಂದಿಯನ್ನು ರ‍್ಯಾಂಡಮೈಸೇಶನ್ ಮಾಡುವ ಮೂಲಕ ನಿಯೋಜಿಸಲಾಗುವುದು. ಮತ ಎಣಿಕೆ ಕಾರ್ಯವು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ ಎಂದರು.

ಮತ ಎಣಿಕಾ ಕೇಂದ್ರಕ್ಕೆ ಅಧಿಕೃತವಾಗಿ ಗುರುತಿನ ಚೀಟಿ ಹೊಂದಿದ ಅಧಿಕಾರಿಗಳು, ಸಿಬ್ಬಂದಿ, ಏಜೆಂಟರು ಹಾಗೂ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಮತ ಎಣಿಕಾ ಕೇಂದ್ರಕೆ ಯಾರೊಬ್ಬರಿಗೂ ಮೊಬೈಲ್ ತೆಗೆದುಕೊಂಡು ಬರುವ ಅವಕಾಶ ಇರುವುದಿಲ್ಲ. ಅದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಮತ ಎಣಿಕಾ ಕೊಠಡಿಯಲ್ಲಿ ಎರಡು ಟೇಬಲ್‌ಗೆ ಒಂದು ಸಿ.ಸಿ.ಟಿ.ವಿ ಯನ್ನು ಅಳವಡಿಸಬೇಕು ಹಾಗೂ ಮಹಡಿ ಮೇಲಿರುವ ಕೊಠಡಿಗಳಿಗೆ ಹೋಗುವ ಮೆಟ್ಟಿಲುಗಳಿಗೆ ಸಿ.ಸಿ.ಟಿ.ವಿ ಅಳವಡಿಸಲು ಈಗಾಗಲೇ ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಅದನ್ನು ಪಾಲಿಸಬೇಕು ಎಂದು ಹೇಳಿದರು.

ಮತ ಎಣಿಕಾ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಸೇವಾ ಕೇಂದ್ರವನ್ನು ತೆರೆಯಬೇಕು. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧಿ, ಸಲಕರಣೆ ಮತ್ತಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಹಾಗೂ ಅಂಬುಲೆನ್ಸ್ ಅನ್ನು ಸಿದ್ಧವಾಗಿರುವಂತೆ ನಿಯೋಜಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮತದಾನ ಕೇಂದ್ರದಲ್ಲಿ ನಿರಂತರ ವಿದ್ಯುಚ್ಛಕ್ತಿ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಯಾವುದೇ ರೀತಿಯ ದುರಸ್ಥಿ ಮತ್ತಿತರ ತುರ್ತು ಕಾರ್ಯಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ತಿಳಿಸಿದರು.

ಮತ ಎಣಿಕೆ ಕಾರ್ಯವು ಸಂಪೂರ್ಣವಾಗಿ ಮುಗಿದ ನಂತರ ಮತ ಯಂತ್ರಗಳನ್ನು ಸುಭದ್ರವಾಗಿ ಇಡಲು ಅಗತ್ಯವಿರುವ ಎಲ್ಲ ಸಿದ್ಧತೆ ಹಾಗೂ ಸಿಬ್ಬಂದಿಯನ್ನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದವರಿಗೆ ಮಾಹಿತಿಗಳನ್ನು ಪಡೆದು, ನೀಡಲು ಅನುಕೂಲವಾಗುವಂತೆ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು. ಸುದ್ದಿ ಬಿತ್ತರಿಸಲು ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ತಿಳಿಸಿದರು.

ಮತ ಎಣಿಕೆ ಅಭ್ಯರ್ಥಿಯ ಪರವಾದ ಏಜೆಂಟರು ನಿಗದಿತ ಮತ ಎಣಿಕಾ ಕೊಠಡಿಗೆ ಹೋಗಲು ಪ್ರತ್ಯೇಕ ವಿಧಾನಸಭಾವಾರು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನಿಗದಿಪಡಿಸಿದ ಮಾರ್ಗದಲ್ಲಿ ಹೋಗಬೇಕು. ಏಜೆಂಟರುಗಳಿಗೆ ಈಗಾಗಲೇ ನೀಡಿರುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಮತ ಎಣಿಕಾ ಕೇಂದ್ರಕ್ಕೆ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರು, ಅಧಿಕಾರಿಗಳು, ಸಿಬ್ಬಂದಿ ತೆರಳಲು ಪ್ರತ್ಯೇಕ ಗೇಟ್ ಮೂಲಕ ವ್ಯವಸ್ಥೆ ಮಾಡಬೇಕು. ಅವುಗಳ ಮೂಲಕವೇ ಬರುವಂತೆ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕಾ ಕೇಂದ್ರಕ್ಕೆ ಅಭ್ಯರ್ಥಿ ಪರ ಏಜೆಂಟರುಗಳು ಮೊಬೈಲ್‌ಗಳನ್ನು ಕೊಂಡೊಯ್ದಿದ್ದರು ಎಂಬ ಬಗ್ಗೆ ತಿಳಿದುಬಂದಿದೆ. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕೆಂದರು.

ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ತಿಂಡಿ ಹಾಗೂ ಊಟದ ವ್ಯವಸ್ಥೆಗಳನ್ನು ಮಾಡಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯಕ್ಕೆ ಬರುವ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತಂಗಲು ಕೊಠಡಿ ವ್ಯವಸ್ಥೆ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಹಾಯಕ ಕಮೀಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಉಡುಪಿ ಎಸ್‌ಪಿ ಡಾ. ಅರುಣ್ ಕೆ, ಹಾಗೂ ಮತ್ತಿತರ ಅಧಿಕಾರಿಗಳು ವರ್ಚುವಲ್ ಮೂಲಕ ಭಾಗವಹಿಸಿದ್ದರು.